ತಿರುವನಂತಪುರ: ಮುಖ್ಯಮಂತ್ರಿ ಕಚೇರಿಯಲ್ಲಿ ಹೊಸ ಕಾನೂನು ಕೋಶ ರಚಿಸಲಾಗಿದೆ. ಹೈಕೋರ್ಟ್ ಹಿರಿಯ ಸರ್ಕಾರಿ ಪ್ಲೀಡರ್ ಎಂ.ಎಸ್. ರಾಜೇಶ್ ಕೋಶದ ಮುಖ್ಯಸ್ಥರಾಗಿ ನಿಯೋಜಿತರಾಗಿದ್ದಾರೆ. ಪ್ರಕರಣಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರವು ವ್ಯಾಪಕವಾದ ಸವಾಲುಗಳನ್ನು ಎದುರಿಸುತ್ತಿರುವ ಈ ಹೊತ್ತಲ್ಲಿ ಕಾನೂನು ವ್ಯವಹಾರಗಳ ಕೋಶದ ರಚನೆ ಆಗಿರುವುದು ಕುತೂಹಲಕ್ಕೂ ಕಾರಣವಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣವೂ ಸೇರಿದಂತೆ ಸರ್ಕಾರದ ವಿರುದ್ದ ಹಲವು ಆರೋಪಗಳು ಕೇಳಿಬರುತ್ತಿರುವ ವೇಳೆ ಹೊಸ ಕೋಶವನ್ನು ರಚಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹೊಸ ಕಾನೂನು ವ್ಯವಹಾರಗಳ ಕೋಶದಲ್ಲಿ ಹಾಲಿ ಕಾನೂನು ಕಾರ್ಯದರ್ಶಿ, ಅಡ್ವೊಕೇಟ್ ಜನರಲ್, ಪ್ರಾಸಿಕ್ಯೂಷನ್ ಮಹಾನಿರ್ದೇಶಕರು, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮತ್ತು ಸರ್ಕಾರದ ಕಾನೂನು ವ್ಯವಹಾರಗಳ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಕಾನೂನು ಕೋಶದ ವ್ಯವಸ್ಥೆಯಲ್ಲಿರುವರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಡಳಿತದ ಕೊನೆಯ ಹಂತದಲ್ಲಿ ಕಾನೂನು ಕೋಶ ಏಕೆ ಬೇಕಿತ್ತು. ಈಗಿರುವ ವ್ಯವಸ್ಥೆಯನ್ನೇ ನಿಭಾಯಿಸಲು ಸಾಧ್ಯವಾಗದಿರುವಾಗ ಯಾವ ಕಾನೂನು ಸಮಸ್ಯೆಗಳನ್ನು ಸರ್ಕಾರ ಎದುರಿಸಲಿದೆ ಎಂದು ಸರ್ಕಾರದ ವಿರುದ್ಧ ಪ್ರಶ್ನೆಗಳು ಇದೀಗ ಎದ್ದಿವೆ.
ಸರ್ಕಾರ ಮೂಲಗಳ ಪ್ರಕಾರ, ಚಿನ್ನ ಕಳ್ಳಸಾಗಣೆ ಪ್ರಕರಣ, ಸಚಿವ ಕೆ.ಟಿ.ಜಲೀಲ್ ಮತ್ತು ಲೈಫ್ ಮಿಷನ್ ಅವ್ಯವಹಾರದ ಬಗ್ಗೆ ಸಿಬಿಐ ನಡೆಸುತ್ತಿರುವ ತನಿಖೆ ಒಳಗೊಂಡಂತೆ ಸರ್ಕಾರದ ವಿರುದ್ದ ಎದ್ದಿರುವ ವಿವಾದಗಳು ಹೊಸ ನಿರ್ಧಾರದ ಹಿಂದೆ ಇರಬಹುದು ಎಂದೇ ವಿಶ್ಲೇಶಿಸಲಾಗಿದೆ.