ಅಹಮದಾಬಾದ್: ಕೃಷಿ ಕ್ಷೇತ್ರವನ್ನು ಬಲಪಡಿಸಲು ತಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ರೈತರು ಸಂಕಷ್ಟು ಎದುರಿಸುವ ಪರಿಸ್ಥಿತಿ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ರೈತರಿಗಾಗಿ ಹಮ್ಮಿಕೊಳ್ಳಲಾಗಿರುವ 'ಕಿಸಾನ್ ಸೂರ್ಯೋದಯ ಯೋಜನೆ' ಸೇರಿದಂತೆ ಆರೋಗ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಗುಜರಾತ್‌ನ ಮೂರು ಯೋಜನೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿ, ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ಉತ್ಪಾದನಾ ವೆಚ್ಚ ಮತ್ತು ಅವರ ತೊಂದರೆಗಳನ್ನು ಕಡಿಮೆ ಮಾಡಲು ಬದಲಾಗುತ್ತಿರುವ ಸಮಯದೊಂದಿಗೆ ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.
ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಸ್ವಾತಂತ್ರ್ಯ ನೀಡಲು ಅಥವಾ ಸಾವಿರಾರು ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು, ಸ್ಥಗಿತಗೊಂಡ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಥವಾ ಬೆಳೆ ವಿಮಾ ಯೋಜನೆಯನ್ನು ಸುಧಾರಿಸುವುದು, ಯೂರಿಯಾಗೆ ಶೇ 100 ರಷ್ಟು ಬೇವಿನ ಲೇಪನ ಹಾಗೂ ಮಣ್ಣಿನ ಆರೋಗ್ಯ ಕಾರ್ಡ್ ಯಾವುದೇ ಇರಲಿ ಕೃಷಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಕೃಷಿ ಕ್ಷೇತ್ರವನ್ನು ಬಲಪಡಿಸುವುದೇ ಇದರ ಉದ್ದೇಶ. ಅದಕ್ಕಾಗಿ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನೀರಾವರಿಗಾಗಿ ಹಗಲುಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಇತ್ತೀಚೆಗೆ ಕಿಸಾನ್ ಸೂರ್ಯೋದಯ ಯೋಜನೆ (ಕೆಎಸ್‌ವೈ)' ಘೋಷಿಸಿತ್ತು. ಈ ಯೋಜನೆಯಡಿ ಬೆಳಿಗ್ಗೆ 5ರಿಂದ ರಾತ್ರಿ 9ರ ವರೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ₹ 470 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಅಹಮದಾಬಾದ್‌ನ ಯುಎನ್ ಮೆಹ್ತಾ ಇನ್ಸ್‌ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಅಲ್ಲದೆ, ಇತ್ತೀಚೆಗೆ ಪೂರ್ಣಗೊಂಡ ರೋಪ್‌ವೇ ಯೋಜನೆಯನ್ನು ರಾಜ್ಯದ ಜುನಾಗಡ್ ನಗರದ ಸಮೀಪವಿರುವ ಪ್ರಮುಖ ಪ್ರವಾಸಿ ಮತ್ತು ಯಾತ್ರಾ ಸ್ಥಳವಾದ ಮೌಂಟ್ ಗಿರ್ನಾರ್‌ನಲ್ಲಿ ಸೇವೆಗೆ ಮುಕ್ತಗೊಳಿಸಿದರು. 2.3 ಕಿ.ಮೀ ಉದ್ದದ ರೋಪ್‌ವೇ ಅನ್ನು ಏಷ್ಯಾದ ಅತಿ ಉದ್ದದ ದೇವಾಲಯದ ರೋಪ್‌ವೇ ಎಂದು ಹೇಳಲಾಗುತ್ತಿದೆ.
'ಅಡೆತಡೆಗಳು ಇರದಿದ್ದರೆ ಗಿರ್‌ನಾರ್ ರೋಪ್‌ವೇ ಯೋಜನೆ ಇಷ್ಟು ವರ್ಷಗಳ ಕಾಲ ಸ್ಥಗಿತಗೊಳ್ಳುತ್ತಿರಲಿಲ್ಲ. ಜನರು ಮತ್ತು ಪ್ರವಾಸಿಗರು ಇದರ ಲಾಭವನ್ನು ಬಹಳ ಹಿಂದೆಯೇ ಪಡೆಯಬಹುದಿತ್ತು' ಎಂದು ಯೋಜನೆ ವಿಳಂಬವಾಗಿದ್ದಕ್ಕೆ ಪ್ರತಿಪಕ್ಷಗಳೇ ಕಾರಣ ಎಂದು ಮೋದಿ ಆರೋಪಿಸಿದರು.
'ಸಾರ್ವಜನಿಕ ಪ್ರಾಮುಖ್ಯತೆಯ ಇಂತಹ ಯೋಜನೆಗಳು ದೀರ್ಘಕಾಲದವರೆಗೆ ಸ್ಥಗಿತಗೊಂಡಾಗ ರಾಷ್ಟ್ರದ ಭಾಗವಾಗಿ ನಾವೆಲ್ಲರೂ ಜನರಿಗೆ ಮತ್ತು ದೇಶಕ್ಕೆ ಆಗುವ ನಷ್ಟದ ಬಗ್ಗೆ ಯೋಚಿಸಬೇಕು. ಹೊಸ ಯೋಜನೆಯಿಂದಾಗಿ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪ್ರವಾಸಿಗರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಹೆಚ್ಚಿನ ಜನರು (ಸ್ಥಳಕ್ಕೆ) ಭೇಟಿ ನೀಡುತ್ತಾರೆ. ಪ್ರವಾಸಿಗರು ಪ್ರಯಾಣಕ್ಕೆ ಸುಲಭವಾಗಬೇಕೆಂದು ಬಯಸುತ್ತಾರೆ' ಎಂದು ಅವರು ಹೇಳಿದರು.
ಸರ್ದಾರ್ ಸಾಹೇಬರಿಗೆ (ವಲ್ಲಭಭಾಯಿ ಪಟೇಲ್) ಅರ್ಪಿತವಾದ ಏಕತಾ ಪ್ರತಿಮೆಯನ್ನು ನೋಡಿ. ವಿಶ್ವದ ಅತಿ ಎತ್ತರದ ಪ್ರತಿಮೆ ಈಗ ದೊಡ್ಡ ಪ್ರವಾಸಿ ಆಕರ್ಷಣೆಯಾಗುತ್ತಿದೆ. ಕೊರೊನಾ ವೈರಸ್ ಸೋಂಕು ವ್ಯಾಪಿಸುವ ಮುನ್ನ 45 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಡಿಮೆ ಅವಧಿಯಲ್ಲಿ ಇದು ದೊಡ್ಡ ಸಾಧನೆ. ಇದೀಗ ಮತ್ತೆ ತೆರೆಯಲಾಗಿದ್ದು, ಪ್ರವಾಸಿಗರ ಸಂಖ್ಯೆಯು ವೇಗವಾಗಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.