ಮಂಜೇಶ್ವರ: ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ ವತಿಯಿಂದ 152ನೇ ಗಾಂಧೀ ಜಯಂತಿ ಆಚರಣೆ ವರ್ಕಾಡಿಯಲ್ಲಿ ಶುಕ್ರವಾರ ಜರಗಿತು.
ಶಾಂತಿ ಸೇನಾ ಫೌಂಡೇಶನ್ ಸಂಚಾಲಕ, ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಪುಷ್ಪಾರ್ಚನೆಗೈದರು. ಬಳಿಕ ಮಾತನಾಡಿದ ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸತ್ಯ, ಶಾಂತಿ, ಅಹಿಂಸೆಯ ಮೂಲಕ ಇಡೀ ಜಗತ್ತನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ, ಭಾರತವೆಂದರೆ ಅದು ಗಾಂಧೀಜಿ, ಇದು ಗಾಂಧೀಜಿಯ ಭಾರತ, ಫ್ಯಾಸಿಸ್ಟ್ ಶಕ್ತಿಗಳ ಕಪಿಮುಷ್ಠಿಯೊಳಗೆ ಸಿಲುಕಿ ಈ ದೇಶ ಛಿಧ್ರಗೊಂಡಿರುವಾಗ ಕೊನೆಯ ಆಸರೆಯೆಂಬಂತೆ ಇನ್ನೂ ಜೀವಂತವಾಗಿರುವ ಗಾಂಧೀ ಚಿಂತನೆಗಳು ನಮ್ಮೊಳಗೆ ಆತ್ಮವಿಶ್ವಾಸವನ್ನು ಮೂಡಿಸುತ್ತವೆ, ಭರವಸೆಯ ಕ್ಷಕಿರಣವನ್ನು ಮೂಡಿಸುತ್ತವೆ ಎಂದು ಹೇಳಿದರು.
ಫೌಂಡೇಶನ್ ಕೋಶಾಧಿಕಾರಿ ದಿವಾಕರ್ ಎಸ್.ಜೆ.ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಉಮ್ಮರ್ ಬೋರ್ಕಳ ಮುಖ್ಯ ಭಾಷಣಗೈದರು. ಮೊಹಮ್ಮದ್ ಮಜಾಲು, ಸದಾಶಿವ.ಕೆ, ಶರೀಫ್ ಅರಿಬೈಲು, ಹಮೀದ್ ಕಣಿಯೂರು ಮತ್ತಿತರರು ಉಪಸ್ಥಿತರಿದ್ದರು.