ಕಾಸರಗೋಡು: ಕೋವಿಡ್ ಕರ್ತವ್ಯದಲ್ಲಿದ್ದು ಸೋಂಕಿಗೊಳಗಾಗಿ ನಿನ್ನೆ ಮೃತರಾದ ಪುತ್ತಿಗೆ ಪದ್ಮನಾಭ ಮಾಸ್ತರ್ ಅವರ ಸಾವಿಗೆ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಅಕ್ಷಮ್ಯ ಅನಾಸ್ಥೆ ಕಾರಣವಾಗಿದೆ. ಸಾವಿನ ಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ ಶ್ರೀಕಾಂತ ಆರೋಪಿಸಿದ್ದಾರೆ.
ಯಾವುದೇ ಸುರಕ್ಷಾ ಉಪಕರಣಗಳನ್ನು ನೀಡದೆ ಸರ್ಕಾರ ಸ್ಥಳೀಯ ಅಧ್ಯಾಪಕರಿಗೆ ಒತ್ತಾಯದ ಕೋವಿಡ್ ಡ್ಯೂಟಿ (ಮ್ಯಾಶ್) ಯ ಆದೇಶ ನೀಡಲಾಗುತ್ತಿದೆ. ಅನೇಕ ಶಿಕ್ಷಕರು ಭಯದಿಂದ ಡ್ಯೂಟಿ ಸ್ವೀಕರಿಸಿದ್ದಾರೆ. ಮನೆ ಸಂಪರ್ಕ ಮಾಡಿ ಜನಜಾಗೃತಿ ಮೂಡಿಸುವ ಈ ಅಧ್ಯಾಪಕರ ಆರೋಗ್ಯ ರಕ್ಷಣೆಗೆ ಸರ್ಕಾರ, ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಹಜವಾಗಿ ಮುಂಜಾಗ್ರತಾ ಕ್ರಮವಾಗಿ ಸಾನಿಟೈಸರ್,ಮಾಸ್ಕ್, ಪಿ.ಪಿ.ಇ.ಕಿಟ್ ಗಳ ಪೂರೈಕೆ ಮಾಡದೆ ಬರಿಗೈಯಿಂದ ಯುದ್ಧ ರಂಗಕ್ಕೆ ಕಳಿಸುವಂತೆ ಅಧ್ಯಾಪಕರನ್ನು ಜನರ ಮಧ್ಯೆ ಅಟ್ಟಿದ ಫಲವಾಗಿ ಓರ್ವ ಪರಿಶಿಷ್ಟ ಜಾತಿಯ ಬಡಕುಟುಂಬದ ಅಧ್ಯಾಪಕನನ್ನು ಮಹಾಮಾರಿಗೆ ಬಲಿಕೊಟ್ಟಂತೆ ಆಗಿದೆ ಎಂದು ಶ್ರೀಕಾಂತ್ ಟೀಕಿಸಿದ್ದಾರೆ.
ಪದ್ಮನಾಭ ಮಾಸ್ತರರಿಗೆ ಸರಿಯಾದ ಚಿಕಿತ್ಸೆಯನ್ನು ಕೊಡುವಲ್ಲಿ ಆರೋಗ್ಯ ಇಲಾಖೆ ವಿಫಲಗೊಂಡಿದೆ ಎಂದು ಆಕ್ಷೇಪ ಕೇಳಿ ಬರುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕೋವಿಡ್ ಆರೋಗ್ಯ ಚಟುವಟಿಕೆಗಳ ಕಾರ್ಯನಿರತ ಅಧ್ಯಾಪಕನೆಂದು ಪದ್ಮನಾಮ ಮಾಸ್ತರರನ್ನು ಪರಿಗಣಿಸಿ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ಮಾಷ್ ಯೋಜನಾ ಪ್ರಕಾರ ಕರ್ತವ್ಯಕ್ಕೆ ನೇಮಕ ಗೊಳಿಸುವ ಅಧ್ಯಾಪಕರು ಗಳನ್ನು ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಎಲ್ಲಾ ಸುರಕ್ಷತೆಯನ್ನು ಏರ್ಪಡಿಸಬೇಕು ಮತ್ತು ಇನ್ಸೂರೆನ್ಸ್ ಒದಗಿಸಿಕೊಡಲು ರಾಜ್ಯ ಸರ್ಕಾರ ತಯಾರಾಗಬೇಕೆಂದು ಶ್ರೀಕಾಂತ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯ ನಿರ್ವಹಿಸುವ ಅಧ್ಯಾಪಕರ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು, ಡ್ಯೂಟಿಯಲ್ಲಿರುವ ಅಧ್ಯಾಪಕರನ್ನು ರಕ್ಷಿಸುವ ಹೊಣೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಕೆ. ಶ್ರೀಕಾಂತ್ ಆಗ್ರಹಿಸಿರುವರು.