ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆ.ಎಸ್.ಆರ್.ಟಿ.ಸಿ.)ಯ ಬಸ್ ನ ಎಂಪನೆಲ್ ನೌಕರರನ್ನು ಆ ನಷ್ಟದ ಕಾರಣದಿಂದ ವಜಾಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮತ್ತು ಪಿ.ಎಸ್.ಸಿ ಉದ್ಯೋಗದ ಮೂಲಕ ಬಂದವರನ್ನು ಮಾತ್ರ ಖಾಯಂಗೊಳಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು. ಸೋಮವಾರ ಕೋವಿಡ್ ಪರಿಶೀಲನಾ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಈ ವಿಷಯವನ್ನು ಸ್ಪಷ್ಟಪಡಿಸಿದರು.
ಕೆ.ಎಸ್.ಆರ್.ಟಿ.ಸಿ.ಯ ಪುನರುತ್ಥಾನಕ್ಕಾಗಿ ವಿಶೇಷ ಪ್ಯಾಕೇಜ್ ನೀಡಲಾಗುವುದು. ಪ್ರಸಕ್ತ ವರ್ಷದಲ್ಲಿ ಕೆ.ಎಸ್.ಆರ್.ಟಿ.ಸಿ.ಗೆ 2000 ಕೋಟಿ ರೂ.ಬಿಡುಗಡೆಮಾಡಲಾಗುವುದು. ಕಳೆದ ವರ್ಷ 1000 ಕೋಟಿ ರೂ. ನೀಡಲಾಗಿತ್ತು. ಎಲ್.ಡಿ.ಎಫ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 4160 ಕೋಟಿ ರೂ. ಗಳ ಯೋಜನೆ ಮುನ್ನಡೆಸಲಾಗಿದೆ. ಯುಡಿಎಫ್ ಆಳ್ವಿಕೆಯ ಐದು ವರ್ಷಗಳ ಅವಧಿಯಲ್ಲಿ, ಕೆಎಸ್‍ಆರ್‍ಟಿಸಿಗೆ ನೀಡಲಾದ ಒಟ್ಟು ನೆರವು ಕೇವಲ 1220 ಕೋಟಿ ರೂ. ಮಾತ್ರ ಆಗಿತ್ತು. 2012 ರ ಬಳಿಕ ವೇತನ ಪರಿಷ್ಕರಣೆ ಜಾರಿಗೆ ಬಾರದ್ದರಿಂದ ಎಲ್ಲಾ ಖಾಯಂ ಉದ್ಯೋಗಿಗಳೂ ತಿಂಗಳಿಗೆ 1500 ರೂ. ಮಧ್ಯಂತರ ನೆರವು ನೀಡಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆ ಎಸ್ ಆರ್ ಟಿ ಸಿ ಯ ಅಂಗಸಂಸ್ಥೆಯಾದ ಸಿಫ್ಟ್ ಸಂಸ್ಥೆಯಲ್ಲಿ ಉದ್ಯೋಗ ಖಾಯಂ ಆಗದ ನೌಕರರನ್ನು ನೇಮಕ ಮಾಡಿಕೊಳ್ಳಲಾಗುವುದು. ಸ್ಕ್ಯಾನಿಯಾ, ದೂರ ಪ್ರಯಾಣದ ಬಸ್ಸುಗಳು ಮತ್ತು ಹೊಸದಾಗಿ ಖರೀದಿಸಿದ ಬಸ್ಸುಗಳು ಸಿಫಿಟ್ ಮೂಲಕ ಕಾರ್ಯನಿರ್ವಹಿಸಲಿವೆ. ವೆಚ್ಚ ಕಡಿತದ ಭಾಗವಾಗಿ ಕ್ರಮಗಳನ್ನು ಮುಂದುವರಿಸಲಾಗುವುದು. ಕೆಎಸ್‍ಆರ್‍ಟಿಸಿ ಒಡೆತನದ ಎಲ್ಲಾ ಜಮೀನುಗಳನ್ನು ನಿಗಮಕ್ಕೆ ಹೊರೆಯಾಗದಂತೆ ಜಮೀನು ರೇಖೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಹೊಸ ಯೋಜನೆಯ ಅನ್ವಯ ಮುಂದಿನ ಮೂರು ವರ್ಷಗಳಲ್ಲಿ ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನು 500 ಕೋಟಿ ರೂ.ಗೆ ಇಳಿಸುವ ಉದ್ದೇಶವನ್ನು ಕೆಎಸ್‍ಆರ್‍ಟಿಸಿ ಹೊಂದಿದೆ. ಕೆಎಸ್‍ಆರ್‍ಟಿಸಿ ಒದಗಿಸುವ ಉಚಿತ ಸೇವೆಗಳಿಗೆ ಪ್ರತಿಯಾಗಿ ಸರ್ಕಾರವು ಈ ಮೊತ್ತವನ್ನು ನಿಗಮಕ್ಕೆ ಅನುದಾನವಾಗಿ ನೀಡುವುದನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.