ತಿರುವನಂತಪುರ: ರಾಜ್ಯದ ವೈದ್ಯಕೀಯ ಕಾಲೇಜುಗಳ ವೈದ್ಯರ ಮುಷ್ಕರವನ್ನು ಹಿಂಪಡೆಯಲಾಗಿದೆ. ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈದ್ಯರ ಅಮಾನತು ಘಟನೆಯನ್ನು ಮರುಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿರುವರು. ಡಿಎಂಇ ವರದಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಸಚಿವರು ಹೇಳಿದರು.
ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮೈಯಲ್ಲಿ ಹುಳ ಮುತ್ತಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಶಿಸ್ತು ಕ್ರಮವನ್ನು ವಿರೋಧಿಸಿ ರಾಜ್ಯದ ವೈದ್ಯಕೀಯ ಕಾಲೇಜುಗಳ ವೈದ್ಯರು ಮುಷ್ಕರ ನಡೆಸಿದ್ದರು. ಚರ್ಚೆಯ ನಂತರ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ನಾಳೆ ಸಂಜೆ ವೇಳೆಗೆ ಡಿಎಂಇ ವರದಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆರೋಗ್ಯ ಇಲಾಖೆ ವಿರುದ್ಧದ ಆರೋಪಗಳು ವಿಷಾದಕರ ಎಂದು ಸಚಿವೆ ಕೆ.ಕೆ.ಶೈಲಜಾ ಹೇಳಿದರು. ರಾಜ್ಯದ ಆರೋಗ್ಯ ಕ್ಷೇತ್ರವು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಇದೊಂದು ಹೊಸ ಅನುಭವವಾಗಿದೆ ಎಂದು ಅವರು ಹೇಳಿದರು. ಆರೋಗ್ಯ ಕಾರ್ಯಕರ್ತರು ದಿನನಿತ್ಯ ಕೋವಿಡ್ ಸಹಿತ ಇತರ ರೋಗಗಳು ಬಾಧಿಸಿ ಆಸ್ಪತ್ರೆಗೆ ದಾಖಲಾಗುವವರ ನಿರಂತರ ಸೇವೆಯಲ್ಲಿ ಹೆಣಗಾಡುತ್ತಿದ್ದಾರೆ. ಈ ಹಂತದಲ್ಲಿ ಗೌಣ ಕಾರಣಗಳನ್ನು ಹುಡುಕಿ ಸಂದಿಗ್ದತೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಗಮನಸೆಳೆದರು.
ಇದೀಗ ಶಿಸ್ತು ಕ್ರಮಕ್ಕೆ ಒಳಗಾದವರು ತ್ಯಾಗ, ಸೇವೆಗಳಿಂದ ಸ್ತುತ್ಯರ್ಹರಾದವರು. ಮತ್ತು ಅಲ್ಪ ಪ್ರಮಾಣದ ವೈಫಲ್ಯಗಳು ಸಂಭವಿಸಿವೆ ಎಂಬುದು ಸತ್ಯ ಎಂದು ಸಚಿವರು ತಿಳಿಸಿದರು. ವಟ್ಟಿಯೂರ್ಕಾವ್ ಮೂಲದ ವ್ಯಕ್ತಿಯೊಬ್ಬರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಾಗ ಅವರ ದೇಹದಲ್ಲಿ ಹುಳುಗಳು ಕಂಡುಬಂದವು. ಘಟನೆ ವಿವಾದಾಸ್ಪದವಾದ ಬಳಿಕ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿತ್ತು. ಬಳಿಕ ಇದನ್ನು ವಿರೋಧಿಸಿ ರಾಜ್ಯ ವ್ಯಾಪಕವಾಗಿ ವೈದ್ಯರು-ಸಿಬ್ಬಂದಿಗಳು ಸೋಮವಾರ ಬೆಳಿಗ್ಗೆ ಎರಡು ಗಂಟೆಗಳ ಮುಷ್ಕರ ನಡೆಸಿದ್ದರು.