ತಿರುವನಂತಪುರಂ: ಕೊರೊನಾ ವೈರಸ್‌ಗೆ ತುತ್ತಾಗಿ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರಲ್ಲಿ ಉಂಟಾದ ಹಾಸಿಗೆ ಹುಣ್ಣಿನಲ್ಲಿ ಹುಳಗಳು ಉಂಟಾಗಿವೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಈ ಸಂಬಂಧ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಸೋಮವಾರ ತನಿಖೆಗೆ ಆದೇಶಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಶೈಲಜಾ ಸೂಚನೆ ನೀಡಿದ್ದಾರೆ.
55 ವರ್ಷದ ರೋಗಿ ಅನಿಲ್ ಕುಮಾರ್ ಅವರ ಕುಟುಂಬದವರು ಆರೋಗ್ಯ ಸಚಿವರಿಗೆ ಭಾನುವಾರ ದೂರು ನೀಡಿದ್ದರು. ಸುದೀರ್ಘ ಕಾಲದಿಂದ ಅನಾರೋಗ್ಯದಿಂದ ಅನಿಲ್ ಕುಮಾರ್ ಹಾಸಿಗೆ ಹಿಡಿದಿದ್ದರು. ಕೊರೊನಾ ವೈರಸ್‌ಗೆ ಒಳಗಾಗಿ ಚೇತರಿಸಿಕೊಂಡ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ವಾಪಸ್ ಕರೆತಂದಿದ್ದರು. ಆದರೆ ಅವರ ದೇಹದಲ್ಲಿ ಹಾಸಿಗೆ ಹುಣ್ಣಾಗಿದ್ದು, ಅದರಲ್ಲಿ ಹುಳಗಳು ಹರಿದಾಡುತ್ತಿದ್ದವು ಎಂದು ಕುಟುಂಬದವರು ಆರೋಪಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಅನಿಲ್ ಕುಮಾರ್ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು' ಎಂದು ಸಚಿವೆ ಶೈಲಜಾ ಹೇಳಿಕೆ ನೀಡಿದ್ದಾರೆ.
ಐಸಿಯುದಲ್ಲಿದ್ದರು
ದಿನಗೂಲಿ ಕಾರ್ಮಿಕರಾದ ಅನಿಲ್ ಕುಮಾರ್ ಅವರು ಆಗಸ್ಟ್ 21ರಂದು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಎದ್ದು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಐಸಿಯುಗೆ ವರ್ಗಾಯಿಸಲಾಗಿತ್ತು. ಆಗ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಕ್ವಾರೆಂಟೈನ್‌ಗೆ ಒಳಗಾಗುವಂತೆ ಕುಟುಂಬದವರಿಗೆ ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು,
ಭರವಸೆ ನೀಡಿದ್ದ ಆಸ್ಪತ್ರೆ
'ಆದರೆ ಅಪ್ಪನ ಸ್ಥಿತಿಯ ಬಗ್ಗೆ ನಾವು ವಿಚಾರಿಸಿದಾಗ ಅವರ ಯೋಗಕ್ಷೇಮವನ್ನು ತಾವು ಚೆನ್ನಾಗಿ ನೋಡಿಕೊಳ್ಳುವುದಾಗಿ ಆಸ್ಪತ್ರೆಯವರು ಭರವಸೆ ನೀಡಿದ್ದರು' ಎಂದು ಅವರ ಮಗಳು ಅಂಜನಾ ತಿಳಿಸಿದ್ದಾರೆ. ಅಪ್ಪನ ಸ್ಥಿತಿ ಸ್ಥಿರವಾಗಿದೆ. ಅವರನ್ನು ಡಿಸ್ಚಾರ್ಜ್ ಮಾಡುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು ಎಂದು ಮಗ ಅಭಿಲಾಷ್ ಹೇಳಿದರು.
ಮನೆಯಲ್ಲಿ ಕಂಡ ದೃಶ್ಯ
'ಅವರನ್ನು ಬಿಡುಗಡೆ ಮಾಡುವ ವೇಳೆ ಆಸ್ಪತ್ರೆಯು ಆಂಬುಲೆನ್ಸ್‌ನಲ್ಲಿ ನರ್ಸ್ ಒಬ್ಬರನ್ನು ಕಳುಹಿಸಿದ್ದರು. ನಮ್ಮ ಮನೆಯಲ್ಲಿ ಅವರನ್ನು ಹಾಸಿಗೆಗೆ ಇರಿಸುವಾಗ ಅವರ ದೇಹದಲ್ಲಿ ಹುಳುಗಳಾಗಿರುವುದನ್ನು ಕಂಡೆವು' ಎಂದು ಅಭಿಲಾಷ್ ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಉತ್ತರ ನೀಡದ ಕಾರಣ ಮನೆಯವರು ಸಚಿವರಿಗೆ ದೂರು ಸಲ್ಲಿಸಿದ್ದಾರೆ.
ಗರ್ಭಿಣಿಯ ಒದ್ದಾಟ
ಕೇರಳದ ಉತ್ತರ ಭಾಗದಲ್ಲಿ ಗರ್ಭಿಣಿಯೊಬ್ಬರು ಪ್ರಸವ ವೇದನೆ ಅನುಭವಿಸುವಾಗ ಆಸ್ಪತ್ರೆಗಳು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಇದರಿಂದ ಅವರ ಗರ್ಭದಲ್ಲಿದ್ದ ಅವಳಿ ಶಿಶುಗಳೆರಡೂ ಮೃತಪಟ್ಟಿದ್ದವು. 20 ವರ್ಷದ ಮಹಿಳೆ ಶನಿವಾರ ಬೆಳಿಗ್ಗೆಯಿಂದ ಹೆರಿಗೆ ನೋವಿನ ಕಾರಣ ಮೂರು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಕೋವಿಡ್ ಶಿಷ್ಟಾಚಾರಗಳ ನೆಪದಲ್ಲಿ ಆಸ್ಪತ್ರೆಗಳು ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಕೊನೆಗೆ ಶನಿವಾರ ಸಂಜೆ ಸರ್ಕಾರಿ ಆಸ್ಪತ್ರೆಯೊಂದು ದಾಖಲಿಸಿಕೊಂಡಿತ್ತು. ಆದರೆ ಅವರ ಎರಡೂ ಮಕ್ಕಳು ಮೃತಪಟ್ಟಿದ್ದವು.