ತಿರುವನಂತಪುರ:ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇರಳಕ್ಕೆ ಹೊರ ರಾಜ್ಯಗಳಿಂದ ಅಗಮಿಸುವವರಿಗೆ ಸರ್ಕಾರ ಹೊಸ ಮಾನದಂಡ ಪ್ರಕಟಿಸಿದ್ದು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಿದೆ. ಕೋವಿಡ್ ಬಾಧಿತರಿಗೆ ಪ್ರತ್ಯೇಕ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯದ ವಿವಿಧ ಗಡಿಗಳಲ್ಲಿ ಸರ್ಕಾರವು ತಪಾಸಣೆಗಳನ್ನು ಬಿಗಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವೆ ಕೆ.ಕೆ.ಶ್ಯೆಲಜಾ ಸ್ಪಷ್ಟಪಡಿಸಿರುವರ.
ಇತರ ರಾಜ್ಯಗಳಿಂದ ಬರುವವರು ನಕಾರಾತ್ಮಕ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಕೋವಿಡ್ ಗುಣಮುಖರಾದವರಲ್ಲಿ ಅನೇಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ಗಮನಕ್ಕೆ ಬಂದ ಕಾರಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ನಂತರದ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.
ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಕೋವಿಡ್ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ನವೆಂಬರ್‌ನಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಕೋವಿಡ್ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಂತೆ ಕೋವಿಡ್ ವೈರಸ್ ಬಗ್ಗೆ ಸಾರ್ವಜನಿಕ ಅಧ್ಯಯನ ನಿಟ್ಟಿನಲ್ಲಿ ಮಧ್ಯ ಮತ್ತು ದಕ್ಷಿಣ ಕೇರಳದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಕೋವಿಡ್ ಪ್ರಕರಣಗಳ ಹೆಚ್ಚಳದ ಹೊರತಾಗಿಯೂ, ಸಾವಿನ ಪ್ರಮಾಣವನ್ನು ನಿಯಂತ್ರಣಕ್ಕೆ ತರಲಾಗಿದೆ. ಕೇರಳದಲ್ಲಿ ಮರಣ ಪ್ರಮಾಣ ಕೇವಲ 0.4 ರಷ್ಟು ಮಾತ್ರ ಇದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಹೆಚ್ಚು ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುತ್ತದೆ. ಆದರೆ ಇದಕ್ಕಾಗಿ ಆಸಕ್ತ ಕಾರ್ಯಕರ್ತರ ಕೊರತೆ ಹಿನ್ನಡೆಯಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಲ್ಲ. ಈ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ.ಕೇಂದ್ರ ಆಯುಷ್ ಇಲಾಖೆಯ ನೆರವಿನೊಂದಿಗೆ ಕೋವಿಡ್ ಬಳಿಕದ ತುರ್ತು ಚಿಕಿತ್ಸಾ ಆಸ್ಪತ್ರೆ ಗಳನ್ನು ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದರು.