ಕಾಸರಗೋಡು:ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿ ಷರತ್ತಿನನ್ವಯ ನೇಮ, ಕೋಲ, ದೈವನರ್ತನ ಇತ್ಯಾದಿ ಆಚಾರ ಅನುಷ್ಠಾನಗಳಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿ ಸಭೆಯಲ್ಲಿ ಷರತ್ತುಗಳೊಂದಿಗೆ ದೈವ ನರ್ತನಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ.
ದೈವ ನರ್ತನ ಸಂಬಂಧಿಸಿ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕು.ದೈವ ನರ್ತಕ, ಪರಿಚಾರಕರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಮತ್ತು ನೆಗೆಟಿವ್ ಸರ್ಟಿಫಿಕೇಟ್ ನೀಡಬೇಕು.ಒಂದು ದಿನ, ನಿರ್ದಿಷ್ಟ ಸ್ಥಳದಲ್ಲಿ ನಡೆಸಲು ಅನುಮತಿಸಿದ ಕಾರ್ಯಕ್ರಮದಲ್ಲಿ ಗರಿಷ್ಠ 20 ಜನರು ಭಾಗವಹಿಸಬಹುದು.
ನವರಾತ್ರಿ ಆಚರಣೆಗೆ ಅನುಮತಿ ಇಲ್ಲ:
ಕೋವಿಡ್ ಹರಡುವಿಕೆ ತಡೆಗಟ್ಟುವ ಕ್ರಮಗಳ ಭಾಗವಾಗಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 17 ರಿಂದ 26 ರವರೆಗೆ ನವರಾತ್ರಿ ಆಚರಣೆ ನಡೆಸಲು ಅವಕಾಶ ನೀಡದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕಾಸರಗೋಡು ಮೀನು ಮಾರುಕಟ್ಟೆಯ ಚಟುವಟಿಕೆಗೆ ತಾತ್ಕಾಲಿಕ ನಿಷೇಧ
ಕೊರೊನಾ ಕೋರ್ ಸಮಿತಿ ಸಭೆಯಲ್ಲಿ ಕಾಸರಗೋಡು ಮೀನು ಮಾರುಕಟ್ಟೆಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
ನಿಬಂಧನೆಗಳನ್ನು ಪಾಲಿಸಿ ಮೀನು ಮಾರುಕಟ್ಟೆಯ ಚಟುವಟಿಕೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕಾಸರಗೋಡು ನಗರಸಭೆ ಕಾರ್ಯದರ್ಶಿ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪಿಎಸ್ ಸಿ ತರಬೇತಿ ಕೇಂದ್ರಗಳ ಕಾರ್ಯಾಚರಣೆ ಪುನರಾರಂಭಕ್ಕೆ ಅನುಮತಿ ಇಲ್ಲ
ಶಾಲೆಗಳು ಪುನರಾರಂಭಿಸದ ಕಾರಣ ಪ್ರಸ್ತುತ ಪಿಎಸ್‍ಸಿ ಕೋಚಿಂಗ್ ಕೇಂದ್ರಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು-ಕಾಸರಗೋಡು ರಹದಾರಿಯಲ್ಲಿ ಕರ್ನಾಟಕ ಸರಕಾರಿ ಬಸ್ ಸೇವೆ ಆರಂಭಕ್ಕೆ ಅನುಮತಿ ಕೋರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ ಮನವಿ ಸರಕಾರಕ್ಕೆ ಹಸ್ತಾಂತರ:
ಮಂಗಳೂರು-ಕಾಸರಗೋಡು ರಹದಾರಿಯಲ್ಲಿ ಕರ್ನಾಟಕ ಸರಕಾರಿ ಬಸ್ ಸೇವೆ ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ ಪತ್ರವನ್ನು ಸರಕಾರಕ್ಕೆ ಹಸ್ತಾಂತರಿಸಲಾಗುವುದು.ಈ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುವ ತೀರ್ಮಾನವನ್ನು ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಉತ್ತರವಾಗಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಎಡಿಎಂ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಮಾಹಿತಿ ಕಚೇರಿ ಅಧಿಕಾರಿ ಮದುಸೂದನ್, ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.