ಕುಂಬಳೆ: ಕೋವಿಡ್ ಕರ್ತವ್ಯ(ಮ್ಯಾಶ್) ದಲ್ಲಿದ್ದ ಅಧ್ಯಾಪಕರೋರ್ವರು ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ದಾರುಣರಾಗಿ ಮೃತಪಟ್ಟ ಘಟನೆ ಇಂದು ಜನಸಾಮಾನ್ಯರನ್ನು ತೀವ್ರ ನೋವಿಗೆ ಕಾರಣವಾಗಿದೆ.
ಪುತ್ತಿಗೆ ಮುಖಾರಿಕಂಡ ನಿವಾಸಿ, ಸೂರಂಬೈಲು ಸರ್ಕಾರಿ ಶಾಲಾ ಶಿಕ್ಷಕ ಪದ್ಮನಾಭ(45) ಕೋವಿಡ್ ಬಾಧಿಸಿ ಮೃತಪಟ್ಟ ದುರ್ದೈವಿ ಶಿಕ್ಷಕರಾಗಿದ್ದಾರೆ.
ಪುತ್ತಿಗೆ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಉಪಕ್ರಮಗಳಲ್ಲಿ ಅತ್ಯಂತ ಹೆಚ್ಚು ಸಕ್ರೀಯರಾಗಿದ್ದ ಇವರಿಗೆ ಕಳೆದ ಕೆಲವು ದಿನಗಳಿಂದ ಕೋವಿಡ್ ಲಕ್ಷಣಗಳು ಕಂಡುಬಂದಿತ್ತು. ಬಳಿಕ ನಡೆಸಿದ ತಪಾಸಣೆಯಲ್ಲಿ ಕೋವಿಡ್ ದೃಢಪಡಿಸಲಾಗಿತ್ತು. ಬಳಿಕ ಇವರನ್ನು ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಕಾರ್ಯವೆಸಗುತ್ತಿರುವ ಪ್ರಥಮ ಕೋವಿಡ್ ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿತ್ತು. ಈ ಸಂದರ್ಭ ತನಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೆಂದು ಪದ್ಮನಾಭ ಅವರು ಸ್ನೇಹಿತರಲ್ಲಿ ಅವಲತ್ತುಕೊಂಡಿದ್ದರು. ಈ ಬಗ್ಗೆ ಹಲವರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಸೂಕ್ತ ಚಿಕಿತ್ಸಾ ನೆರವು ನೀಡಿಲ್ಲ ಎಂದು ಇದೀಗ ಭಾರೀ ವಿವಾದಗಳು ಹುಟ್ಟಿಕೊಂಡಿವೆ.
ಕೋವಿಡ್ ಕರ್ತವ್ಯದಲ್ಲಿದ್ದ ಸರ್ಕಾರಿ ಶಿಕ್ಷಕರಿಗೇ ಅಗತ್ಯದ ತುರ್ತು ಚಿಕಿತ್ಸೆ ನೀಡುವಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿರುವುದು ಜನಸಾಮಾನ್ಯರ ಮೇಲೆ ಭಾರೀ ಪರಿಣಾಮಕ್ಕೆ ಕಾರಣವಾಗುತ್ತಿದ್ದು, ಜೊತೆಗೆ ಕನ್ನಡ ಭಾಷೆಯ ಶಿಕ್ಷಕರಾದುದರಿಂದ ಮಲತಾಯಿ ಧೋರಣೆಯ ನಿರ್ಲಕ್ಷ್ಯಕ್ಕೆ ಶಿಕ್ಷಕನೂ ಬಲಿಯಾದರೆಂಬ ಮಾತುಗಳು ಕೇಳಿಬಂದಿದೆ.