ಕುಂಬಳೆ/ಉಪ್ಪಳ: ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಬಹುತೇಕ ತಗ್ಗು ಪ್ರದೇಶಗಳು, ಪೇಟೆಗಳು ಜಲಾವೃತಗೊಂಡಿದೆ.
ಪೇಟೆಗಳ ಚರಂಡಿ ವ್ಯವಸ್ಥೆಯ ಅವ್ಯವಸ್ಥೆಯಿಂದ ನೀರು ಸಂಗ್ರಹಗೊಂಡು ಹೊರುಕ್ಕಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಸೃಷ್ಟಿಸಿತು.
ಹೊಸಂಗಡಿ ಆನೆಕಲ್ಲು ಬಸ್ ತಂಗುದಾಣ ಭಾಗದಿಂದ ಮಳೆನೀರು ಪೂರ್ತಿ ರಸ್ತೆಯಲ್ಲಿ ಹರಿದು ಪೇಟೆಯಲ್ಲಿ ಕಟ್ಟಿನಿಲ್ಲತೊಡಗಿದೆ. ಬೆಳಿಗ್ಗೆ ಸುರಿದ ಮಳೆಗೆ ಹೊಸಂಗಡಿ ಸರ್ಕಲ್ ಬಳಿ ಹೊಳೆಯಂತೆ ನೀರುಕಟ್ಟಿ ನಿಂತಿರುವುದು ಭಾರೀ ಸಮಸ್ಯೆಗೆ ಕಾರಣವಾಯಿತು.
ಉಪ್ಪಳ ಬಸ್ ನಿಲ್ದಾಣ ಪ್ರವೇಶಿಸುವಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡು ಬೃಹತ್ ಹೊಳೆಯಂತೆ ಗೋಚರಿಸುತ್ತಿತ್ತು. ವಾಹನಗಳ ಆಗಮನ, ನಿರ್ಗಮನಗಳಿಗೂ ಅಡಚಣೆಯಾಗಿದ್ದು, ಕೆಲವು ಬಸ್ ಗಳು ನಿಲ್ದಾಣ ಪ್ರವೇಶಿಸದೆ ಹೆದ್ದಾರಿಯಲ್ಲೇ ನಿಲುಗಡೆಗೊಳಿಸಿದ್ದು ಕಂಡುಬಂದಿದೆ.
ಕುಂಬಳೆ ಸಮೀಪದ ನಾರಾಯಣಮಂಗಲ ಕಾನ ಮಠ ಸಮೀಪದಲ್ಲಿ ತೋಡು ಎಲ್ಲೆಮೀರಿ ಪ್ರವಹಿಸಿದ್ದು ಮಠಕ್ಕೆ ಸೇರಿದ ಶ್ರೀಧೂಮಾವತಿ ದೈವಸ್ಥಾನದೊಳಗೆ ನೀರು ನುಗ್ಗಿ ನಿತ್ಯ ನೈಮಿತ್ತಿಕಗಳಿಗೆ ಅಡಚಣೆ ಉಂಟಾಯಿತು.