ಕೊಚ್ಚಿ: ಮಾಜಿ ಮುಖ್ಯಮಂತ್ರಿಯ ಐಟಿ ಕಾರ್ಯದರ್ಶಿ ಎಂ.ಶಿವಶಂಕರ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್ ಪಿ ವೇಣುಗೋಪಾಲ್ ನಡುವಿನ ವಾಟ್ಸಾಪ್ ಚಾಟ್ ಗಳು ಹೊರಬಿದ್ದಿವೆ. ಶಿವಶಂಕರ್ ಅವರು ಸ್ವಪ್ನಾ ಅವರ ಹಣದ ವಹಿವಾಟು ಮತ್ತು ಪ್ರಕರಣದ ಬಗ್ಗೆ ತಿಳಿದಿದ್ದಾರೆ ಎಂಬ ತೀರ್ಮಾನಕ್ಕೆ ತನಿಖಾ ಸಂಸ್ಥೆಗಳು ಬಂದಿವೆ ಎಂಬ ಅಂಶದಲ್ಲಿ ಈ ಪುರಾವೆಗಳು ಮುಖ್ಯವಾಗಿವೆ. ಸ್ವಪ್ನಾ ಸುರೇಶ್ ಬಂಧನಕ್ಕೊಳಗಾದ ದಿನ ಶಿವಶಂಕರ್ ಅವರು ವೇಣುಗೋಪಾಲ್ ಅವರಿಗೆ ರಾಜ್ಯದಿಂದ ಹೊರಗುಳಿಯುವಂತೆ ಸೂಚನೆ ನೀಡಿರುವುದು ಸಾಕ್ಷ್ಯದಿಂದ ತಿಳಿದುಬಂದಿದೆ.
ಚಾರ್ಜ್‍ಶೀಟ್ ಸಲ್ಲಿಸುವವರೆಗೆ ರಜೆ ತೆಗೆದುಕೊಳ್ಳಿ ಮತ್ತು ಸಾಧ್ಯವಾದರೆ ನಾಗರ್ ಕೋಯಿಲ್ ಅಥವಾ ಬೇರೆ ಯಾವುದಾದರೂ ಸ್ಥಳಕ್ಕೆ ತೆರಳುವಂತೆ ಶಿವಶಂಕರ್ ವೇಣುಗೋಪಾಲ್ ಗೆ ಹೇಳಿರುವರು. ಪ್ರಕರಣ ದಾಖಲಾಗಿದ್ದರೆ ವೇಣುಗೋಪಾಲ್ ಸಾಕ್ಷಿಗಳ ಪಟ್ಟಿಯಲ್ಲಿರುತ್ತಾರೆ ಎಂದು ಶಿವಶಂಕರ್ ತರ್ಕಿಸಿದ್ದರು.
ಸ್ವಪ್ನಾ ಮತ್ತು ವೇಣುಗೋಪಾಲ್ ಅವರ ಜಂಟಿ ಖಾತೆಯಲ್ಲಿ ಬ್ಯಾಂಕ್ ಲಾಕರ್ ಇದೆ ಎಂದು ತನಿಖಾ ತಂಡಕ್ಕೆ ಈಗಾಗಲೇ ಮಾಹಿತಿ ಬಂದಿದೆ. ಎನ್.ಐ.ಎ ಈಗಾಗಲೇ ಒಂದು ಕೋಟಿ ರೂ. ವಶಪಡಿಸಿಕೊಂಡಿದೆ.
ಸ್ವಪ್ನಾಳಿಗಾಗಿ ಲಾಕರ್‍ನಲ್ಲಿ ಹಣವನ್ನು ಠೇವಣಿ ಇಡುವುದಕ್ಕೆ ಸಂಬಂಧಿಸಿದ ಎಲ್ಲವನ್ನೂ ವಾಟ್ಸಾಪ್‍ನಲ್ಲಿ ಇಬ್ಬರೂ ಚರ್ಚಿಸಿದ್ದಾರೆ. ಹೂಡಿಕೆಯನ್ನು ಹೇಗೆ ನಿರ್ವಹಿಸಬೇಕು ಎಂದು ಶಿವಶಂಕರ್ ವೇಣುಗೋಪಾಲ್ ಅವರನ್ನು ಕೇಳುತ್ತಾರೆ. ಇವರಿಬ್ಬರ ನಡುವಿನ ಚಾಟ್ ನವೆಂಬರ್ 2018 ರಿಂದ ಪ್ರಾರಂಭವಾಗಿತ್ತು. ತೆರಿಗೆ ತಜ್ಞ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವೇಣು ಗೋಪಾಲ್ ಶಿವಶಂಕರ್ ಅವರ ಗಳಸ್ಯ ಸ್ನೇಹಿತರಾಗಿರುವುದು ಉಲ್ಲೇಖಾರ್ಹವೂ ಆಗಿದೆ.
ಬ್ಯಾಂಕಿನಲ್ಲಿ 35 ಲಕ್ಷ ರೂ. ಠೇವಣಿ ಇರಿಸಿದ್ದರ ಬಗ್ಗೆ, ಹಣಕಾಸು ವ್ಯವಹಾರದ ಬಗೆಗೂ ಶಿವಶಂಕರ್ ಅವರು ವೇಣುಗೋಪಾಲ್ ರೊಂದಿಗೆ ಸಮಾಲೋಚನೆ ನಡೆಸಿದ್ದು ಇದೆಯೇ ಎಂದು ಇ.ಡಿ. ಶಿವಶಂಕರ್ ಅವರ ತನಿಖೆಯ ಭಾಗವಾಗಿ ಪ್ರಶ್ನಿಸಿದಾಗ ಇಲ್ಲ ಎಂಬ ಉತ್ತರವನ್ನು ಶಿವಶಂಕರ್ ನೀಡಿದ್ದರು. ಸ್ವಪ್ನಾ ಅವರ ಹಣದ ವಹಿವಾಟಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದೂ ಶಿವಶಂಕರ್ ಉತ್ತರಿಸಿದ್ದರು. ಆದರೆ ವಾಟ್ಸಾಪ್ ಚಾಟ್ ಮೂಲಕ ಹೊರಬಂದಿರುವ ಮಾಹಿತಿಯು ಈ ಎಲ್ಲದಕ್ಕೂ ವಿರುದ್ಧವಾಗಿರುವುದು ಇದೀಗ ಕುತೂಹಲ ಮೂಡಿಸಿದ್ದು ಭಾರೀ ಅವ್ಯವಹಾರ, ವಂಚನೆಯ ಸರಪಳಿ ಭಾರೀ ಆಳಕ್ಕಿರುವುದು ವ್ಯಕ್ತವಾಗುತ್ತಿದೆ.