ಮುಂಬೈ: ಟಿಆರ್ ಪಿ ರೇಟಿಂಗ್ ನ್ನು ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಿಇಒ ವಿಚಾರಣೆಗೆ ಹಾಜರಾಗಿದ್ದಾರೆ.
ಮುಂಬೈ ನ ಕ್ರೈಮ್ ಬ್ರಾಂಚ್ ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಖಾಂಚಂದಾನಿ ಅವರನ್ನು ವಿಚಾರಣೆಗೊಳಪಡಿಸಿದೆ. ಲಾಭಕ್ಕಾಗಿ ಟಿಆರ್ ಪಿ ರೇಟಿಂಗ್ ನ್ನು ತಿರುಚಿದ ಪ್ರಕರಣ ಬಹಿರಂಗಗೊಂಡಿದ್ದು ಮೂರು ಟಿವಿ ಚಾನಲ್ ವಿರುದ್ಧ ಆರೋಪ ಕೇಳಿಬಂದಿದೆ. ಈ ಪೈಕಿ ಎರಡು ಟಿವಿ ಚಾನಲ್ ನವರನ್ನು ಬಂಧಿಸಿದ್ದಾರೆ.
ಈ ನಡುವೆ ರಿಪಬ್ಲಿಕ್ ಚಾನಲ್ ನ ಸಿಎಫ್ಒ ಶಿವ ಸುಬ್ರಹ್ಮಣಿಯಮ್ ಸುಂದರಮ್ ಅವರಿಗೂ ಸಹ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಲಾಗಿತ್ತು.
ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಚಾನಲ್ ನವರೂ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಟಿಆರ್ ಪಿಯನ್ನು ಹೊಂದಿರುವ ಚಾನಲ್ ಎಂದು ರಿಪಬ್ಲಿಕ್ ಹೇಳುತ್ತದೆ. ಆದರೆ ಸುಶಾಂತ್ ಸಿಂಗ್ ರಜ್ಪೂತ್ ಪ್ರಕರಣದಲ್ಲಿ ಪೊಲೀಸರ ಪಾತ್ರವನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಿಪಬ್ಲಿಕ್ ಚಾನಲ್ ಹೇಳಿದೆ.
ಅರ್ನಬ್ ಗೋಸ್ವಾಮಿ ಈ ಬಗ್ಗೆ ಮಾತನಾಡಿದ್ದು ಮುಂಬೈ ಪೊಲೀಸ್ ಮುಖ್ಯಸ್ಥರು ಸಾರ್ವಕನಿಕವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಪೊಲೀಸ್ ಸಮನ್ಸ್ ಜಾರಿಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿರುವುದಾಗಿ ರಿಪಬ್ಲಿಕ್ ಚಾನಲ್ ನ ಸಿಎಫ್ಒ ಶಿವ ಸುಬ್ರಹ್ಮಣಿಯಮ್ ಸುಂದರಮ್ ಹೇಳಿದ್ದಾರೆ.