ಬೆಂಗಳೂರು: ಇಷ್ಟು ದಿನ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿ ಉಸಿರಾಟ ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದಷ್ಟೇ ಹೇಳಲಾಗುತ್ತಿದ್ದ ಮಹಾಮಾರಿ ಕೊರೋನಾ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡು ಇದೀಗ ಮನುಷ್ಯನ ಅಪಧಮನಿಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಿ ಮಾರಣಾಂತಿಕ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಬೆಂಗಳೂರು ನಗರದ ಕೊಲಂಬಿಯಾ ಏಷಿಯಾದಲ್ಲಿ ಪ್ರಕರಣವೊಂದು ಪತ್ತೆಯಾಗಿದೆ. ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಮತ್ತೆ ಕೊರೋನಾ ಸೋಂಕು ಕಾಣಿಸಿದೆ. ಆದರೆ, ಈ ಬಾರಿ ಸೋಂಕಿನ ಲಕ್ಷಣಗಳು ಬೇರೆಯದ್ದೇ ಆಗಿರುವುದು ವೈದ್ಯರಲ್ಲಿ ಅಚ್ಚರಿ, ಆತಂಕವನ್ನುಂಟು ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯಲ್ಲಿ ಅತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ವೇಳೆ ಪರಿಶೀಲನೆ ನಡೆಸಿದ ವೈದ್ಯರಿಗೆ ವ್ಯಕ್ತಿಯ ಬಲ ಮೂತ್ರಪಿಂಡದ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ಇದೀಗ ಇದನ್ನೂ ಕೂಡ ಕೊರೋನಾ ಲಕ್ಷಣವೆಂದು ಹೇಳಲಾಗುತ್ತಿದೆ.
ಪ್ರಕರಣದಿಂದಾಗಿ ಕೊರೋನಾ ಕೇವಲ ಶ್ವಾಸಕೋಶದ ಮೇಲಷ್ಟೇ ಅಲ್ಲದೆ ಅಪಧಮನಿಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಿ ಮಾರಣಾಂತಿಕ ಸಮಸ್ಯೆಯನ್ನು ತಂದೊಡ್ಡಿದೆ. ಇಂತಹ ಲಕ್ಷಣಗಳಿಂದ ಉಂಟಾಗುವ ಸಾವುಗಳನ್ನು ನಿಯಂತ್ರಿಸಲು ಸೋಂಕನ್ನು ಶೀಘ್ರಗತಿಯಲ್ಲಿ ಗುರ್ತಿಸುವದಷ್ಟೇ ಪರಿಹಾರವಾಗಿದೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸಲಹೆಗಾರ ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ನವೀನ್ ಚಂದ್ರ ಅವರು ಹೇಳಿದ್ದಾರೆ.
ವ್ಯಕ್ತಿಗೆ ಆಂಜಿಯೋಗ್ರಾಮ್ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿತ್ತು. ಇದರಿಂದ ದೇಹದ ನಿರ್ದಿಷ್ಟ ಅಂಗಗಳಿಗೆ ರಕ್ತದ ಪೂರೈಕೆಯಾಗದ ಕಾರಣದ ಸಾವುಗಳು ಸಂಭವಿಸುವ ಸಾಧ್ಯತೆಗಳಿರುತ್ತದೆ. ವ್ಯಕ್ತಿಗೆ ಇನ್ಫಾರ್ಕ್ಷನ್ ಚಿಕಿತ್ಸೆಯ ಅಗತ್ಯವಿದೆ. ಚಿಕಿತ್ಸೆ ನೀಡದೇ ಹೋದರೆ, ರಕ್ತ ಹೆಪ್ಪುಗಟ್ಟುವುದರಿಂದ ದೇಹದಲ್ಲಿ ರಕ್ತ ಹರಿಯುವಿಕೆಯಲ್ಲಿ ಸಮಸ್ಯೆ ಎದುರಾಗಲಿದೆ. ಇದರಿಂದ ವ್ಯಕ್ತಿಯಲ್ಲಿ ಪಾರ್ಶ್ವವಾಯು, ಹೃದಯಾಘಾತ ಮತ್ತು ಇತರೆ ಸಾವು ಸಂಭವಿಸುವಂತಹ ಅಪಾಯಗಳು ಎದುರಾಗಬಹುದು ಎಂದು ತಿಳಿಸಿದ್ದಾರೆ.
ವ್ಯಕ್ತಿಗೆ ಇದೀಗ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಚಿಕಿತ್ಸೆಯನ್ನು ನೀಡಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.