ತಿರುವನಂತಪುರ: ಲಾಕ್ ಡೌನ್ ಘೋಷಣೆಯ ಬಳಿಕ ಮೊದಲ ಬಾರಿಗೆ ಭಕ್ತರು ಶಬರಿಮಲೆಗೆ ಭೇಟಿ ನೀಡಲು ಕೊನೆಗೂ ದೇವಸ್ವಂ ಬೋರ್ಡ್ ತೀರ್ಮಾನ ಕೈಗೊಳ್ಳಲಾಗಿದೆ. ತುಲ ಮಾಸದ ಪೂಜೆಗೆ ಸಂಬಂಧಿಸಿದ ಶಬರಿಮಲೆ ದರ್ಶನಕ್ಕೆ ಭಕ್ತಾದಿಗಳಿಗೆ ಶನಿವಾರದಿಂದ ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಡಿಜಿಪಿ ಲೋಕನಾಥ್ ಬೆಹ್ರಾ ಹೊರಡಿಸಿದ ಆದೇಶದಲ್ಲಿ ವರ್ಚುವಲ್ ಕ್ಯೂ ವ್ಯವಸ್ಥೆಯು ಶನಿವಾರ ರಾತ್ರಿ 11 ಗಂಟೆಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.
ಮುಖ್ಯ ಕಾರ್ಯದರ್ಶಿ ಮಟ್ಟದ ಸಮಿತಿಯ ವರದಿಯ ಆಧಾರದ ಮೇಲೆ ಶಬರಿಮಲೆ ಯಾತ್ರೆಗೆ ಅನುಮತಿ ನೀಡಲಾಗಿದೆ. ಒಂದು ಸಮಯದಲ್ಲಿ ಗರಿಷ್ಠ 250 ಭಕ್ತರಿಗೆ ಮಾತ್ರ ಸನ್ನಿಧಾನಕ್ಕೆ ಅನುಮತಿಸಲಾಗುವುದು. ಶಬರಿಮಲೆ ತಲಪಲು ವಡಸ್ಸೇರಿಕ ಮತ್ತು ಎರುಮೇಲಿ ರಸ್ತೆಗಳ ಮೂಲಕ ಮಾತ್ರ ಅನುಮತಿ ನೀಡಲಾಗಿದೆ. ಯಾತ್ರಿಕರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಸೇರಿದಂತೆ ಯಾರನ್ನೂ ಕೋವಿಡ್ ಭದ್ರತಾ ಮಾನದಂಡಗಳಿಂದ ಮುಕ್ತಗೊಳಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.