ತಿರುವನಂತಪುರ: ರಾಜ್ಯದ ಪೂರ್ವ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಾಡುಹಂದಿಗಳನ್ನು ಕೊಲ್ಲಲು ರಾಜ್ಯ ಸರ್ಕಾರ ಅನುಮತಿ ಕೋರಿದೆ. ಅರಣ್ಯ ಪ್ರದೇಶಗಳಿಗೆ ತಾಗಿಕೊಂಡಿರುವ ಹಳ್ಳಿಗಳಲ್ಲಿ ಹಂದಿ ದಾಳಿ ತೀವ್ರವಾಗಿದೆ ಎಂಬ ಅಂಶಕ್ಕೆ ಪ್ರತಿಕ್ರಿಯೆಯಾಗಿ ಅರಣ್ಯ ಇಲಾಖೆಯ ಹೊಸ ನಿರ್ಧಾರ ಪ್ರಕಟಿಸಿದೆ.
ಅರಣ್ಯ ಸಚಿವ ಕೆ.ರಾಜು ಅವರ ಕಚೇರಿ ಮೂಲಗಳ ಪ್ರಕಾರ ಕಾಡುಹಂದಿಯನ್ನು ಗುಂಡಿಕ್ಕಿ ಕೊಲ್ಲಲು ಅನುಮತಿಸಲಾಗಿದೆ. ಈ ಬಗ್ಗೆ ಶೀಘ್ರ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಾಡುಗಳಿಗೆ ತಾಗಿಕೊಂಡಿರುವ ಗ್ರಾಮ ಪ್ರದೇಶಗಳಲ್ಲಿ ಕಾಡುಹಂದಿಗಳ ಉಪಟಳ ವ್ಯಾಪಕವಾಗಿದೆ. ಅಂತಹ ಪ್ರದೇಶಗಳಲ್ಲಿ ಕಾಡುಹಂದಿಯನ್ನು ಕೊಲ್ಲಲು ಅಧಿಕಾರಿಗಳಿಗೆ ಮತ್ತು ಪರವಾನಗಿ ಪಡೆದ ಬಂದೂಕು ಇರುವವರಿಗೆ ಪ್ರಸ್ತುತ ಅನುಮತಿ ಇದೆ. ಆದಾಗ್ಯೂ ಹಂದಿಗಳ ಉಪಟಳ ನಿಯಂತ್ರಣಕ್ಕೆ ಬಂದಂತಿಲ್ಲ. ಈ ಹಿನ್ನೆಲೆಯಲ್ಲಿ ಕಾಡುಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸಲು ಸರ್ಕಾರ ಚಿಂತಿಸುತ್ತಿದೆ.
ಆದರೆ ಇಂತಹ ಘೋಷಣೆಗೆ ಕೇಂದ್ರ ಅನುಮೋದನೆ ಅಗತ್ಯವಿದೆ. ಈ ಹಿಂದೆ ಸೂಚನೆ ನೀಡಲಾಗಿದ್ದರೂ, ಕೆಲವು ಷರತ್ತುಗಳನ್ನು ಪೂರೈಸಬೇಕಾಗಿತ್ತು ಎಂದು ವರದಿ ಹೇಳುತ್ತದೆ. ಘೋಷಣೆ ಜಾರಿಗೆ ಬಂದರೆ, ಕಾಡುಹಂದಿಯನ್ನು ಹತ್ಯೆಗೈಯ್ಯಲು ರಹದಾರಿ ಸಿದ್ದವಾಗುತ್ತದೆ. ಕಾಡುಹಂದಿ ದಾಳಿ ತೀವ್ರವಾಗಿರುವ ಪ್ರದೇಶಗಳ ವಿವರಗಳನ್ನು ಸಲ್ಲಿಸಿದರೆ ಕಾಡುಹಂದಿಯನ್ನು ಕ್ಲಸ್ಟರ್ ಆಧಾರದ ಮೇಲೆ ಕೊಲ್ಲಲು ಸರ್ಕಾರ ಅನುಮತಿ ಪಡೆಯಬಹುದು. ಅರಣ್ಯ ಸಚಿವರ ಕಚೇರಿಯ ಪ್ರಕಾರ, ಕೇಂದ್ರ ಸರ್ಕಾರವು ಅನುಮೋದನೆ ನೀಡಿದರೆ, ರಾಜ್ಯದಲ್ಲಿ ಕಾಡುಹಂದಿ ಉಪಟಳವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದೆನ್ನಲಾಗಿದೆ.