ಕುಮ್ಮನಂ ಅವರು ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತಕ್ಕಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿದ ಐದು ಸದಸ್ಯರ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷರಾಗಿದ್ದ ಕುಮ್ಮನಂ ಮಿಜೋರಾಂ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇವಾಲಯ ನಿರ್ವಹಣಾ ಸಮಿತಿಯಲ್ಲಿ ಕುಮ್ಮನಂ ಸೇರ್ಪಡೆಗೊಳ್ಳುವ ಬಗ್ಗೆ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ನ್ಯಾಯಾಧೀಶರಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಪತ್ರ ಬರೆದಿದೆ. ತಿರುವನಂತಪುರಂ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಮಂಡಳಿಯು ಕೇಂದ್ರ ಸರ್ಕಾರದ ಪ್ರತಿನಿಧಿ ಹೊರತಾಗಿ ಟ್ರಸ್ಟ್ ನಾಮಿನಿ, ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಯನ್ನು ಹೊಂದಿರುತ್ತದೆ.
ಹರಿಕುಮಾರನ್ ನಾಯರ್ ಅವರ ಸ್ಥಾನಕ್ಕೆ ಕುಮ್ಮನಂ ಅವರನ್ನು ನಾಮನಿರ್ದೇಶನ ಮಾಡಲಾಗುವುದು ಎಂದು ಸಂಸ್ಕೃತಿ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ. ಈ ಹಿಂದೆ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತವನ್ನು ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ವಿಶೇಷ ಸಮಿತಿಗೆ ಸುಪ್ರೀಂ ಕೋರ್ಟ್ ಹಸ್ತಾಂತರಿಸಿತ್ತು. ಸಮಿತಿಯ ಎಲ್ಲ ಸದಸ್ಯರು ಹಿಂದೂಗಳಾಗಿರಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.