ನವದೆಹಲಿ: ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಾಮಾರಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಜನತಾ ಕಫ್ರ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದರು.
ಲಾಕ್ ಡೌನ್ ಅಂತ್ಯವಾಗಿದೆ. ಆದರೆ ಕೊರೋನಾ ಮುಕ್ತವಾಗಿಲ್ಲ. ಹೀಗಾಗಿ ನಾವು ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು.
ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಸಾವಿನ ಪ್ರಮಾಣ ಸಹ ಅತ್ಯಂತ ಕಡಿಮೆ ಇದೆ. ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಶೇ.83ರಷ್ಟಿರುವುದು ನಮ್ಮ ಸಾಧನೆಯೇ ಸರಿ ಎಂದರು.ಕೊರೋನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು. ಲಸಿಕೆಯನ್ನು ದೇಶದ ಪ್ರತಿಯೊಬ್ಬರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ದೇಶದ ಜನತೆಗೆ ಸರಣಿ ಹಬ್ಬಗಳ ಶುಭ ಕೋರಿದ ಪ್ರಧಾನಿ ಮೋದಿ, ಹಬ್ಬಗಳ ಸಮಯದಲ್ಲಿ ಪ್ರತಿಯೊಂದೂ ಕುಟುಂಬವೂ ಸುರಕ್ಷಿತವಾಗಿರುವುದನ್ನು ನೋಡಲು ನಾನು ಬಯಸುತ್ತೇನೆ ಎಂದರು.