ನವದೆಹಲಿ: ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧವಾಗಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಚೀನೀ ಸೇನೆಗೆ ಯುದ್ಧಕ್ಕೆ ಸನ್ನದ್ದವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ನೀಡಿದ ಹೇಳಿಕೆಗೆ ಅಮಿತ್ ಶಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನ್ಯೂಸ್18 ವಾಹಿನಿಯ ಮುಖ್ಯ ಸಂಪಾದಕ ರಾಹುಲ್ ಜೋಷಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ಚೀನಾಗೆ ಒಂದೇ ಒಂದು ಅಂಗುಲ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
“ಪ್ರತಿಯೊಂದು ದೇಶವೂ ಯುದ್ಧಕ್ಕೆ ಸದಾ ಸಿದ್ಧವಾಗಿರುತ್ತದೆ. ಸೇನೆಯನ್ನ ಇಟ್ಟುಕೊಳ್ಳುವುದೇ ಆ ಉದ್ದೇಶಕ್ಕೆ. ಯಾವುದೇ ರೀತಿಯ ಆಕ್ರಮಣವನ್ನು ಎದುರಿಸಲು ಸೇನೆ ಸನ್ನದ್ಧವಾಗಿರುತ್ತದೆ. ನಾನು ಯಾವುದೇ ನಿರ್ದಿಷ್ಟ ಹೇಳಿಕೆ ಬಗ್ಗೆ ಮಾತನಾಡುತ್ತಿಲ್ಲ. ಭಾರತದ ರಕ್ಷಣಾ ಪಡೆಗಳು ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿ ಇರುತ್ತವೆ ಎಂದು ಹೇಳುತ್ತಿದ್ದೇನೆ” ಎಂದು ಗೃಹ ಸಚಿವರು ತಿಳಿಸಿದ್ದಾರೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಪರಸ್ಪರ ಮಾತುಕತೆ ನಡೆಸುತ್ತಿವೆ. ರಾಜತಾಂತ್ರಿಕ ಸಂವಾದ ಮುಕ್ತವಾಗಿಯೇ ಇದೆ… ನಾನೊಬ್ಬ ಗೃಹ ಸಚಿವನಾಗಿ ಈ ಬಗ್ಗೆ ಮಾತನಾಡುವುದು ಪ್ರಸ್ತುತವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನ ಉಲ್ಲೇಖಿಸುತ್ತೇನೆ. ನಾವು ರಕ್ಷಣಾ ಕಾರ್ಯದಲ್ಲಿದ್ದು, ನಮ್ಮ ಭೂಮಿಯ ಒಂದಿಂಚು ಭಾಗವನ್ನೂ ಯಾರೂ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ಭೂಭಾಗದ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಮೇಲೆ ಕಣ್ಣಿಟ್ಟಿರುವ ಚೀನಾಗೆ ತಿರುಗೇಟು ನೀಡಲು ಟಿಬೆಟ್ ಮತ್ತು ತೈವಾನ್ ವಿಚಾರವನ್ನು ಭಾರತ ಕೆದಕುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಅಮಿತ್ ಶಾ, “ಈ ವಿಚಾರವನ್ನು ಇಲ್ಲಿ ಚರ್ಚಿಸುವುದು ಸರಿಯಲ್ಲ. ಇದು ಬಹಳ ಸಂಕೀರ್ಣ ವಿಚಾರವಾಗಿದ್ದು, ಅದರ ಪರಿಣಾಮ ದೂರಗಾಮಿಯಾಗಿರುತ್ತದೆ. ಚೀನಾ ವಿಚಾರದಲ್ಲಿ ಭಾರತದ ನಿಲುವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸಂಸತ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅದು ಸಾವಶ್ಯವೆನಿಸುತ್ತದೆ. ಚೀನಾದೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ…” ಎಂದು ಅಮಿತ್ ಶಾ ವಿವರ ನೀಡಿದ್ದಾರೆ.