ಕಾಸರಗೋಡು: ಕಣ್ಣೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ಬೈಕ್ ಚಲಾಯಿಸಿದ ಯುವಕನಿಗೆ ಆರ್‍ಟಿಓ ದಂಡ ಹೇರುವ ಮೂಲಕ ಬಿಸಿ ಮುಟ್ಟಿಸಿದೆ.
ಸೆಪ್ಟಂಬರ್ 26ರಂದು ಘಟನೆ ನಡೆದಿದ್ದು, ಕಣ್ಣೂರಿನಿಂದ ಹೊರಟ ಬಸ್ ಕರಿವೆಳ್ಳೂರು ಪೆರುಂಬಾವೂರು ತಲುಪುತ್ತಿದ್ದಂತೆ ಬೈಕ್ ಸವಾರನೊಬ್ಬ ಮುಂದೆ ಸಾಗಿ ಬಸ್ಸನ್ನು ಮುಂದಕ್ಕೆ ಸಾಗದಂತೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚಾರ ನಡೆಸಲಾರಂಭಿಸಿದ್ದನು. ಸುಮಾರು ನಾಲ್ಕು ಕಿಲೋಮೀಟರ್ ವರೆಗೂ ಯುವಕ ತನ್ನ ಬೈಕ್‍ನಲ್ಲಿ ಆಟಾಟೋಪ ಮುಂದುವರಿಸಿದ್ದನು. ಬಸ್ ಚಾಲಕ ಹಾಗೂ ಪ್ರಯಾಣಿಕರು ಈತನಿಗೆ ತಿಳಿಹೇಳಿದರೂ ಕೇಳಿಸಿಕೊಳ್ಳದಾದಾಗ ಪ್ರಯಾಣಿಕರೊಬ್ಬರು ಈತನ ದುಂಡಾವರ್ತನೆಯನ್ನು ಮೊಬೈಲಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಮಾಹಿತಿ ಆರ್‍ಟಿಓ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಈತನ ಪತ್ತೆಗಾಗಿ ಮನೆಗೆ ತೆರಳಿದ ಅಧಿಕಾರಿಗಳು ಹತ್ತುವರೆ ಸಾವಿರ ರೂ.ದಂಡ ವಿಧಿಸಿದ್ದಾರೆ.