ನವದೆಹಲಿ: ಮನರಂಜನಾ ಪಾರ್ಕ್ ಗಳನ್ನು ತೆರೆಯಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ ಅಗತ್ಯವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಪ್ರತಿ ರೈಡ್ ಗೂ ಸ್ಯಾನಿಟೈಸರ್, ಸ್ವಾಭಾವಿಕ ಗಾಳಿ, ಈಜುಕೊಳವನ್ನು ಬಂದ್ ಮಾಡುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ,
ಮನರಂಜನಾ ಪಾರ್ಕ್ ಗಳು ಕೋವಿಡ್ ಹರಡುವ ಸೂಪರ್ ಸ್ಪ್ರೆಡರ್ ಗಳಾಗಿವೆ, ಹೀಗಾಗಿ ಮಾರ್ಗಸೂಚಿ ಕಡ್ಡಾಯವಾಗಿ ಅನುಸರಿಸುವಂತೆ ಹೆಚ್ಚಿನ ಜನ ಗುಂಪು ಗೂಡದಂತೆ ನೋಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.
ಈ ದಿನಗಳಲ್ಲಿ ನಿಯಮ ಪಾಲಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನೈಸರ್ಗಿಕ ವಾತವರಣ ಬಳಸಿಕೊಳ್ಳಬೇಕು ಮತ್ತು ಸಣ್ಣ ಸುತ್ತುವರಿದ ಸ್ಥಳಗಳ ಬಳಕೆಯನ್ನು ತಪ್ಪಿಸಬೇಕು, ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಹೊರಗಿನಿಂದ ಬರುವ ಗಾಳಿಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು, ಕಿಟಕಿಗಳನ್ನು ಮತ್ತು ಬಾಗಿಲುಗಳನ್ನು ತೆರೆಯಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಉದ್ಯಾನವನಗಳಿಗಾಗಿ ಹೊರಡಿಸಲಾದ ನಿರ್ದಿಷ್ಟ ಮಾರ್ಗಸೂಚಿಗಳ ಪೈಕಿ, ಪ್ರವೇಶದ ಸಮಯದಲ್ಲಿ ಕ್ಯೂನಲ್ಲಿರುವಾಗ ಮತ್ತು ಸವಾರಿಗಳಿಗೆ ಕನಿಷ್ಠ 6 ಅಡಿಗಳಷ್ಟು ಭೌತಿಕ ದೂರವನ್ನು ಕಾಯ್ದುಕೊಳ್ಳಲು ಸಂದರ್ಶಕರು ಬರುವಾಗ ಮತ್ತು ಹೋಗುವಾಗ ಸ್ಯಾನಿಟೈಸ್ ಮಾಡಲೇಬೇಕು ಎಂದು ಸಚಿವಾಲಯ ಹೇಳಿದೆ.
ಕೊರೋನಾ ವೈರಸ್‌ನಿಂದಾಗಿ ಕಳೆದ ಏಳು ತಿಂಗಳಿನಿಂದ ದೇಶಾದ್ಯಂತ ಮುಚ್ಚಿರುವ ಚಿತ್ರಮಂದಿರಗಳನ್ನು ಅ.15ರಿಂದ ತೆರೆಯಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚಿತ್ರಮಂದಿರಗಳು ಪಾಲಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಚಿತ್ರಮಂದಿರಗಳ ಸಾಮರ್ಥ್ಯದ ಶೇ.50ರಷ್ಟುಪ್ರೇಕ್ಷಕರಿಗೆ ಮಾತ್ರ ಒಂದು ಸಲಕ್ಕೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು. ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಪ್ರೇಕ್ಷಕರನ್ನು ಕುಳ್ಳಿರಿಸಬೇಕು. ಪ್ರತಿ ಪ್ರದರ್ಶನದ ನಂತರವೂ ಆಡಿಟೋರಿಯಂಗಳನ್ನು ಸ್ಯಾನಿಟೈಸ್ ಮಾಡಬೇಕು. ಪ್ರೇಕ್ಷಕರು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿರಬೇಕು ಎಂಬ ನಿಯಮಗಳು ಮಾರ್ಗಸೂಚಿಯಲ್ಲಿವೆ.
ಫುಡ್ ಕೋರ್ಟ್ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಲು ಸಿಸಿಟಿವಿ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಲಾಗಿದೆ.