ನವದೆಹಲಿ: ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲಿನ ಅಪರಾಧ ಕೃತ್ಯ ಪ್ರಕರಣಗಳನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ರಾಜ್ಯಗಳಿಗೆ ಸಲಹೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪೊಲೀಸರ ಕಡೆಯಿಂದ ನಿಯಮ ಪಾಲನೆಯಲ್ಲಿ ಯಾವುದೇ ರೀತಿಯ ವೈಫಲ್ಯಗಳುಂಟಾದರೆ ನ್ಯಾಯ ಸಲ್ಲಿಕೆಗೆ ತೊಂದರೆಯಾಗುತ್ತದೆ ಎಂದು ಹೇಳಿದೆ.
ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ ಮೂರು ಪುಟಗಳ ವಿವರವಾದ ಹೊಸ ಸಲಹೆಯನ್ನು ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ.ಸಿಆರ್ ಪಿಸಿ ಸೆಕ್ಷನ್ ನಡಿಯಲ್ಲಿ ಅರಿವಿನ ಅಪರಾಧಗಳು ನಡೆದರೆ ಎಫ್ಐಆರ್ ಕಡ್ಡಾಯವಾಗಿ ದಾಖಲಿಸಬೇಕು ಎಂದು ಹೇಳಿದೆ.
ಪೊಲೀಸ್ ಠಾಣೆಯ ವ್ಯಾಪ್ತಿಯ ಹೊರಗೆ ಮಹಿಳೆಯ ಮೇಲೆ ಲೈಂಗಿಕ ಹಲ್ಲೆಯಂತಹ ಅಪರಾಧ ಕೃತ್ಯಗಳು ನಡೆದಿದ್ದರೂ ಸಹ ಪೊಲೀಸರು ಎಫ್ಐಆರ್ ಅಥವಾ ಶೂನ್ಯ ಎಫ್ಐಆರ್ ದಾಖಲಿಸಲು ಅವಕಾಶವಿದೆ.
ಅದಾಗ್ಯೂ, ಕಾನೂನಿನಲ್ಲಿ ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಹಲವಾರು ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಂಡಿದ್ದರೂ ಸಹ, ಈ ಕಡ್ಡಾಯ ಅವಶ್ಯಕತೆಗಳನ್ನು ಪಾಲಿಸಲು ಪೊಲೀಸರು ವಿಫಲವಾದರೆ ದೇಶದಲ್ಲಿ ಅಪರಾಧ ನ್ಯಾಯವನ್ನು ತಲುಪಿಸಲು, ವಿಶೇಷವಾಗಿ ಮಹಿಳಾ ಸುರಕ್ಷತೆಯ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ, ಇಂತಹ ಲೋಪದೋಷಗಳು ಕಂಡುಬಂದರೆ, ತನಿಖೆ ನಡೆಸುವ ಅವಶ್ಯಕತೆಯಿದ್ದು, ಅದಕ್ಕೆ ಕಾರಣವಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಎಚ್ಚರಿಕೆ: ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಈ ಸಂಬಂಧ ವಿವರವಾದ ಪತ್ರ ಬರೆದಿದ್ದು, ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳಲ್ಲಿ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಯಾವುದೇ ನೂನ್ಯತೆಯಾದರೆ ಅದನ್ನು ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಮಹಿಳೆಯರ ಮೇಲಿನ ಅತ್ಯಾಚಾರ ಕೇಸುಗಳ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಹೇಳಿದೆ.
ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಕೇಸುಗಳಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳುವುದು, ವಿಧಿವಿಜ್ಞಾನ ಪರೀಕ್ಷೆಗೆ ಸಾಕ್ಷಿಗಳ ಸಂಗ್ರಹ ಮತ್ತು ಲೈಂಗಿಕ ಹಲ್ಲೆ ಸಾಕ್ಷಿ ಸಂಗ್ರಹ ಕಿಟ್, ಎರಡು ತಿಂಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಕೇಸಿನ ವಿಚಾರಣೆಯನ್ನು ಪೂರ್ಣಗೊಳಿಸುವುದು, ಪುನರಾವರ್ತಿತ ಲೈಂಗಿಕ ಅಪರಾಧಿಗಳ ಬಗ್ಗೆ ಮಾಹಿತಿ ಕಲೆಹಾಕಲು ರಾಷ್ಟ್ರೀಯ ದಾಖಲೆಗಳನ್ನು ಬಳಸುವುದು ಇತ್ಯಾದಿ ನಿಯಮಗಳನ್ನು ಪೊಲೀಸರು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದೆ.
ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿ ಅರಿವಿನ ಅಪರಾಧ ಎಂದಾದರೆ ಭಾರತೀಯ ದಂಡ ಸಂಹಿತೆ 1973ರ ಕ್ರಿಮಿನಲ್ ಕೋಡ್ ಸೆಕ್ಷನ್ 154ರ ಸಬ್ ಸೆಕ್ಷನ್ (1)ರಡಿ ಪ್ರಕರಣ ದಾಖಲಿಸಬೇಕು.