ತಿರುವನಂತಪುರ: ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುವುದೆಂದು ರಾಜ್ಯ ಆರೋಗ್ಯ ಸಚಿವೆ ತಿಳಿಸಿದ್ದಾರೆ. ಆರೈಕೆ ಅಗತ್ಯವಿರುವ ರೋಗಿಗಳಿಗೆ ದಾದಿಯರ ಸೇವೆಯನ್ನೂ ವಿಶೇಷವಾಗಿ ಅನುಮತಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಮದು ಸಚಿವೆ ಕೆ.ಕೆ.ಶೈಲಜಾ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರೊಂದಿಗೆ ಸಂಬಂಧಿಕರೋರ್ವರನ್ನು ಜೊತೆಗಿರಲು ಪ್ರಸ್ತುತ ಅವಕಾಶವಿಲ್ಲವಾದರೂ ಯಾವುದೇ ನಿರ್ದಿಷ್ಟ ಕಾರಣಗಳಿದ್ದಲ್ಲಿ ಅವಕಾಶ ನೀಡುವ ಬಗ್ಗೆ ಆಸ್ಪತ್ರೆಯ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಕೋವಿಡ್ ಮಂಡಳಿಯ ನಿರ್ದೇಶನದಂತೆ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧೀಕ್ಷಕರು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಅಧೀಕ್ಷಕರು ರೋಗಿಯ ಸ್ಥಿತಿ ಮತ್ತು ಸಹಾಯದ ಅಗತ್ಯವನ್ನು ಪರಿಶೀಲಿಸಿ ಅಗತ್ಯವಿರುವ ಸಂದರ್ಭಗಳಲ್ಲಿ ಜೊತೆಗಿರಲು ಓರ್ವರಿಗೆ ಅವಕಾಶ ನೀಡುವರು. ಕೋವಿಡ್ ಮಂಡಳಿಯು ಅಂತಹ ವ್ಯಕ್ತಿಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಜೊತೆಗಿರುವವರನ್ನು ಬಿಡುಗಡೆ ಮಾಡಲಾಗುತ್ತದೆ. ರೋಗಿಯ ಸಂಬಂಧಿ ವ್ಯಸನ ರಹಿತನಾಗಿ ಆರೋಗ್ಯವಂತ ವ್ಯಕ್ತಿಯಾಗಿರಬೇಕು ಎಂದು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
ಜೊತೆಗಾರರಾಗಿರುವವರು ಈಗಾಗಲೇ ಕೋವಿಡ್ ಪಾಸಿಟಿವ್ ಆಗಿದ್ದ ವ್ಯಕ್ತಿಯಾಗಿದ್ದರೆ ನೆಗೆಟಿವ್ ಆಗಿ ಒಂದು ತಿಂಗಳು ಕಳೆದಿರಬೇಕು. ಅವರು ಲಿಖಿತ ಒಪ್ಪಿಗೆ ನೀಡಬೇಕು. ಪಿಪಿಇ ಕಿಟ್ ಗಳನ್ನು ಅವರಿಗೆ ನೀಡಬೇಕು ಮತ್ತು ಅವರು ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ತಿಳಿಸಿರುವರು.
ತಿರುವನಂತಪುರದಲ್ಲಿ ಸೋಂಕಿತರೊಬ್ಬರು ಇತ್ತೀಚೆಗೆ ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿ ಬಳಿಕ ಮೈಯಲ್ಲಿ ಹುಳಗಳಾಗಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಸಿಗೆಯ ಮೇಲೆ ಕುಳಿತುಕೊಳ್ಳಲು ಸರ್ಕಾರ ನಿರ್ದೇಶನ ನೀಡಿದೆ.
ಇದೇ ವೇಳೆ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂಬ ವರದಿಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ ನಡೆಸಲು ಪ್ರಾಥಮಿಕ ಕಿರು ತಪಾಸಣಾ ಘಟಕ ಸ್ಥಾಪಿಸಲು ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಇಂತಹ ಕಿಯೋಸ್ಕ್ ಗಳಲ್ಲಿ ಮೊದಲು ವ್ಯಕ್ತಿಗಳ ವಾಸನಾ ಸಾಮಥ್ರ್ಯ ಪರಿಶೀಲಿಸಿ ಬಳಿಕ ಸರ್ಕಾರ ನಿಗದಿಪಡಿಸಿದ ದರದಲ್ಲಿ ಪ್ರತಿಜನಕ ಪರೀಕ್ಷೆಯನ್ನು ನಡೆಸಲಾಗುತ್ತದೆ.