ತಿರುವನಂತಪುರ: ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಗೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ಸೋಂಕು ಖಚಿತವಾದ ಹಿನ್ನೆಲೆಯಲ್ಲಿ ಸಚಿವರು ಕ್ವಾರಂಟೈನ್ ಗೆ ಒಳಗಾಗಿರುವರು. ಇಂದು, ಕೋವಿಡ್ ದೃಢೀಕರಿಸಲ್ಪಟ್ಟ ರಾಜ್ಯದ ಎರಡನೇ ಮಂತ್ರಿ ಜಲೀಲ್ ಆಗಿದ್ದು ಸಚಿವ ಎಂ.ಎಂ.ಮಣಿ ಅವರಿಗೂ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕು ದೃಢಪಟ್ಟಿರುವ ರಾಜ್ಯದ ಐದನೇ ಸಚಿವರು ಜಲೀಲ್ ಆಗಿದ್ದಾರೆ.
ಈಗಾಗಲೇ ರಾಜ್ಯದ ಇತರ ಸಚಿವರುಗಳಾದ ಥಾಮಸ್ ಐಸಾಕ್, ಇಪಿ ಜಯರಾಜನ್ ಮತ್ತು ವಿ.ಎಸ್. ಸುನಿಲ್ ಕುಮಾರ್ ಅವರಿಗೆ ದೃಢಪಟ್ಟು ಚಿಕಿತ್ಸೆಯಲ್ಲಿರುವರು. ಅನಾರೋಗ್ಯ ತೀವ್ರಗೊಂಡ ಕಾರಣ ಸಚಿವ ಇ.ಪಿ.ಜಯರಾಜನ್ ಅವರನ್ನು ನಿನ್ನೆ ತಿರುವನಂತಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಇಂದು ಸೋಂಕು ಪತ್ತೆಯಾದ ಸಚಿವ ಎಂ.ಎಂ.ಮಣಿ ಅವರು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರು ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಅವರಿಗೆ ಹೆಚ್ಚಿನ ಕಾಳಜಿ ಬೇಕು ಎಂದು ವರದಿಯಾಗಿದೆ. ಇದರೊಂದಿಗೆ ಸಚಿವರ ವೈಯಕ್ತಿಕ ಸಿಬ್ಬಂದಿಗಳು ನಿರೀಕ್ಷಣೆಗೆ ಒಳಗಾದರು. ಸಚಿವರೊಂದಿಗೆ ಭಾಗಿಯಾಗಿರುವವರು ಕ್ವಾರಂಟೈನ್ ಗೆ ಒಳಗಾಗುವರೆಂದು ಕಚೇರಿ ಮೂಲಗಳು ಸ್ಪಷ್ಟಪಡಿಸಿದೆ. ಇಂದು ಬೆಳಿಗ್ಗೆ ಆನ್ ಲೈನ್‍ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಚಿವರು ಭಾಗವಹಿಸಿದ್ದರು.