ತಿರುವನಂತಪುರ: ಕೋವಿಡ್ ವ್ಯಾಪಕತೆಯ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ವಿಶ್ವ ಪ್ರಸಿದ್ದ ಧಾರ್ಮಿಕ ಶ್ರದ್ದಾಕೇಂದ್ರ ಶಬರಿಮಲೆ ದೇವಸ್ಥಾನ ಮತ್ತೆ ಕೋವಿಡ್ ನಿಬಂಧನೆಗಳಿಗೆ ಅನುಸಾರ ತೆರೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಮಹಾಮಾರಿಯ ಸಂಕಷ್ಟಗಳನ್ನು ಗಮನದಲ್ಲಿಟು ತಜ್ಞ ಸಮಿತಿಯನ್ನು ರೂಪಿಸಿ ಮಾನದಂಡ ಸಿದ್ದಪಡಿಸಲು ಸೂಚಿಸಿತ್ತು. ತಜ್ಞ ಸಮಿತಿ ನಿಬಂಧನೆಗಳನ್ನು ಸಿದ್ದಪಡಿಸಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಜ್ಞರ ಸಮಿತಿ ವರದಿಯ ಅನುಸಾರ ನಿಬಂಧನೆ ರೂಪಿಸಲಾಗಿದೆ.
ಶ್ರೀಕ್ಷೇತ್ರ ದರ್ಶನಕ್ಕೆ ಇನ್ನು ಪ್ರತಿನಿತ್ಯ ಸಾವಿರ ಭಕ್ತರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಆಗಮಿಸುವ ಭಕ್ತರು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯ ಹಾಜರುಪಡಿಸಬೇಕಾಗುತ್ತದೆ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಪ್ರಮಾಣಪತ್ರದೊಂದಿಗೆ ಬರುವವರಿಗೆ ನಿಲ್ದಾಣದಲ್ಲಿರುವ ಪ್ರವೇಶ ಬಿಂದುಗಳಲ್ಲಿ ಪಾವತಿಸಲು ಮತ್ತು ಪರಿಶೀಲಿಸಲು ಸೌಲಭ್ಯವನ್ನು ಒದಗಿಸಲಾಗುತ್ತದೆ.
60 ವರ್ಷಕ್ಕಿಂತ ಮೇಲ್ಪಟ್ಟ ಭಕ್ತರಿರು ತಮಗೆ ಯಾವುದೇ ಗಂಭೀರ ಕಾಯಿಲೆ ಇಲ್ಲ ಎಂದು ಪ್ರಮಾಣೀಕರಿಸುವ ವರದಿಯನ್ನು ಸಹ ಸಲ್ಲಿಸಬೇಕು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 1,000 ಜನರಿಗೆ ಮತ್ತು ಶನಿವಾರ ಮತ್ತು ಭಾನುವಾರದಂದು 2,000 ಜನರಿಗೆ ಶ್ರೀಕ್ಷೇತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಶಬರಿಮಲೆ ಯಾತ್ರಾರ್ಥಿಗಳ ಮೂಲ ಶಿಬಿರದಲ್ಲಿ ಯಾತ್ರಿಕರ ತಪಾಸಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ. ಬುಧವಾರ ನಡೆದ ಸಂಪುಟ ಸಭೆ ಶಿಫಾರಸುಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.