ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಸ್ತಿ ಮೌಲ್ಯ ಇಳಿಕೆಯಾಗಿದೆ. ಆದರೆ ಪ್ರಧಾನಿ ಮೋದಿ ಅವರ ಆಸ್ತಿಯಲ್ಲಿ ಏರಿಕೆಯಾಗಿದೆ.
ಅಮಿತ್ ಶಾ ಅವರು ಕಳೆದ ವರ್ಷ 32.3 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಆದರೆ ಇದೀಗ ಆ ಆಸ್ತಿ ಮೌಲ್ಯ 28.6 ಕೋಟಿ ರೂ.ಗೆ ಇಳಿಕೆಯಾಗಿದೆ. ಗುಜರಾತಿನಲ್ಲಿ ಅಮಿತ್ ಶಾ 10 ಕಡೆ ಆಸ್ತಿಯನ್ನು ಹೊಂದಿದ್ದಾರೆ. ಇದರ ಒಟ್ಟಾರೆ ಮೌಲ್ಯ 13.56 ಕೋಟಿ ಎಂದು ಅಂದಾಜಿಸಲಾಗಿದೆ.
ಶಾ ಅವರು 15,814 ರೂ. ನಗದು ಹೊಂದಿದ್ದಾರೆ. ಇನ್ನು ಬ್ಯಾಂಕ್ ಖಾತೆಯಲ್ಲಿ 1.04 ಕೋಟಿ ರುಪಾಯಿ ಇಟ್ಟಿದ್ದಾರೆ. 44,47 ಲಕ್ಷ ಮೌಲ್ಯದ ಜ್ಯುವೆಲರಿಯನ್ನು ಹೊಂದಿದ್ದಾರೆ. ಇದನ್ನು ಬಿಟ್ಟರೆ 13,47 ಲಕ್ಷ ವಿಮೆ ಮತ್ತು ಪಿಂಚಿಣಿ ಪಾಲಿಸಿ ಹೊಂದಿದ್ದು, 2.79 ಲಕ್ಷ ರೂ. ನಿಶ್ಚಿತ ಠೇವಣಿ ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯ 36 ಲಕ್ಷ ರುಪಾಯಿಗೆ ಹೆಚ್ಚಳವಾಗಿದೆ. ಪ್ರಧಾನಿ ತಮ್ಮ ಬಳಿ 31,450 ರುಪಾಯಿ ಇಟ್ಟುಕೊಂಡಿದ್ದಾರೆ. ಎಸ್ ಬಿಐ ಗಾಂಧಿನಗರ ಬ್ರಾಂಚ್ ನಲ್ಲಿರುವ ಉಳಿತಾಯ ಖಾತೆಯಲ್ಲಿ 3,38,173 ರೂ. ಇಟ್ಟಿದ್ದಾರೆ.
ಮೋದಿ ಅವರು ಎಲ್ ಅಂಡ್ ಟಿ ಇನ್ ಫ್ರಾಸ್ಟ್ರಕ್ಚರ್ ನಲ್ಲಿ ರೂ. 20 ಸಾವಿರ ಹೂಡಿಕೆ ಮಾಡಿದ್ದಾರೆ. ಇನ್ನು ನಾಲ್ಕು ಚಿನ್ನದ ಉಂಗುರಗಳು ಹೊಂದಿದ್ದು ಇವುಗಳೆಲ್ಲಾ 45 ಗ್ರಾಂ ತೂಕವಿದ್ದು 1,51,875 ರೂ. ಆಗಿದೆ.