ಮುಂಬೈ: ಟಿಆರ್ ಪಿ ಹಗರಣ ಬಹಿರಂಗಗೊಳ್ಳುತ್ತಲೇ ಜಾಹಿರಾತುಗಳನ್ನು ನೀಡುವ ಕಂಪನಿಗಳು ಒಂದಷ್ಟು ಬದಲಾವಣೆಗೆ ಮುಂದಾಗಿವೆ.
ಟಿಆರ್ ಪಿ ಹಗರಣದಲ್ಲಿ ರಿಪಬ್ಲಿಕ್ ಚಾನಲ್ ನ ಹೆಸರು ಕೇಳಿಬಂದಿತ್ತು. ಈ ಬೆನ್ನಲ್ಲೇ ಹೆಸರಾಂತ ಬಿಸ್ಕೇಟ್ ಸಂಸ್ಥೆ ಪಾರ್ಲೇ-ಜಿ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಹಾನಿಕಾರಕ ಅಂಶಗಳನ್ನು ಉತ್ತೇಜಿಸುವ ಚಾನಲ್ ಗಳಿಗೆ ಜಾಹಿರಾತು ನೀಡದಿರಲು ತೀರ್ಮಾನಿಸಿದೆ.
ಪಾರ್ಲೇ-ಜಿಯ ಈ ನಿರ್ಧಾರಕ್ಕೆ ಸಹಜವಾಗಿಯೇ ನೆಟಿಜನ್ ಗಳು ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಟ್ವೀಟಿಗರೂ ಸಹ ಪಾರ್ಲೇ-ಜಿಯ ನಿರ್ಧಾರದ ಬಗ್ಗೆ ಕಾಮೆಂಟ್ ಮಾಡತೊಡಗಿದ್ದಾರೆ.
ಪಾರ್ಲೇ ಉತ್ಪನ್ನಗಳ ಹಿರಿಯ ವಿಭಾಗದ ಮುಖ್ಯಸ್ಥರಾಗಿರುವ ಕೃಷ್ಣರಾವ್ ಬುದ್ಧ ಮಿಂಟ್ ಜೊತೆ ಮಾತನಾಡಿ, ಹಾನಿಕಾರಕ ಅಂಶಗಳನ್ನು ಪ್ರಸಾರ ಮಾಡುವ ಸುದ್ದಿ ವಾಹಿನಿಗಳಲ್ಲಿ ಪಾರ್ಲೇ ಜಾಹಿರಾತು ನೀಡುವುದಿಲ್ಲ ಎಂದು ಹೇಳಿದ್ದರು.
ಬೇರೆ ಜಾಹಿರಾತುದಾರರೂ ಸಹ ಒಟ್ಟಿಗೆ ನಿಂತು ಸುದ್ದಿ ವಾಹಿನಿಗಳ ಮೇಲಿನ ಜಾಹಿರಾತುಗಳನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಮೂಲಕ ಸುದ್ದಿ ವಾಹಿನಿಗಳು ತಾವು ಪ್ರಸಾರ ಮಾಡುವ ಅಂಶಗಳನ್ನು ಬದಲಾವಣೆ ಮಾಡಿಕೊಳ್ಳಲಿ ಎಂಬ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂದು ಕೃಷ್ಣರಾವ್ ತಿಳಿಸಿದ್ದರು.
ಈ ಬಗ್ಗೆ ಟ್ವೀಟಿಗರು ಪ್ರತಿಕ್ರಿಯೆ ನೀಡಿದ್ದು, ಪಾರ್ಲೇ-ಜಿ ಕಂಪನಿಯ ನಿರ್ಧಾರವನ್ನು ಸ್ವಾಗತಿಸಿದ್ದಾರಷ್ಟೇ ಅಲ್ಲದೇ, ಇದೊಂದು ಅದ್ಭುತ ಆಲೋಚನೆ ಎಂದೂ ಹೇಳಿದ್ದಾರೆ.