ಮೈಸೂರು: ಮೈಸೂರು ಸಮೀಪದ ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿಯೊಬ್ಬರು ಕಳೆದ 4 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಬಾ ಪರಮಾಣು ಸಂಶೋಧನಾ ಸಂಸ್ಥೆ (BARC)ನ ಅಪರೂಪದ ವಸ್ತುಗಳ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಅಭಿಷೇಕ್ ರೆಡ್ಡಿ ಗುಲ್ಲಾ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಸಹಾಯಕ ವೈಜ್ಞಾನಿಯಾಗಿದ್ದ ಅಭಿಷೇಕ್ ರೆಡ್ಡಿ ಗುಲ್ಲಾ ಮೈಸೂರಿನ ಇಲವಾಲದಲ್ಲಿರುವ ಕಾವೇರಿ ಲೇಔಟ್‍ನಲ್ಲಿ ವಾಸವಾಗಿದ್ದರು. ಮೈಸೂರಿನಿಂದ 15 ಕಿ.ಮೀ. ದೂರದಲ್ಲಿರುವ ಬಾರ್ಕ್ ನಲ್ಲಿ ಕೆಲಸ ಪಡೆದ ನಂತರ ರೆಡ್ಡಿ ಒಂದು ವರ್ಷದ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಮೈಸೂರಿಗೆ ಬಂದಿದ್ದರು.
ಒಂದೆರಡು ತಿಂಗಳ ಹಿಂದೆ ಹೆತ್ತವರ ಮರಣದ ನಂತರ ರೆಡ್ಡಿ ಒಬ್ಬಂಟಿಯಾಗಿದ್ದರು. ಅವರು ಖಿನ್ನತೆ ಮತ್ತು ಮೈಗ್ರೇನ್‍ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಕ್ಟೋಬರ್ 6 ರ ಮಧ್ಯಾಹ್ನ ರೆಡ್ಡಿ, ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯಿಂದ ಹೊರಹೋಗುವುದನ್ನು ಅವರ ನೆರೆಹೊರೆಯವರು ಕೊನೆಯದಾಗಿ ನೋಡಿದ್ದರು. ಈ ಬಳಿಕ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮೈಸೂರಿನಲ್ಲಿರುವ BARC ನ ಆಡಳಿತಾಧಿಕಾರಿ ಟಿಕೆ ಬೋಸ್ ಅವರು ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಇಲವಾಲ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎನ್.ಎಚ್.ಯೋಗಾನಂದ ಅವರು, ಒಂದೆರಡು ತಿಂಗಳ ಹಿಂದೆ ಹೆತ್ತವರ ಮರಣದ ನಂತರ ರೆಡ್ಡಿ ಒಬ್ಬಂಟಿಯಾಗಿದ್ದರು. ಅಭಿಷೇಕ್ ರೆಡ್ಡಿ ಯಾರಿಗೂ ತಿಳಿಸದೆ ಹೊರಟು ಹೋಗಿದ್ದಾರೆ. ಅಕ್ಟೋಬರ್ 6ರ ಮಧ್ಯಾಹ್ನದಿಂದ ಇವರು ಕಣ್ಮರೆಯಾಗಿದ್ದಾರೆ. ಅಭಿಷೇಕ್ ಜತೆ ಬ್ಲಾಕ್ ಆಕ್ಟಿವಾ(KA 09 JA 0013) ವಾಹನವೂ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಟಿಕೆ ಬೋಸ್ ಅವರು, 'ವೈಜ್ಞಾನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಗುಲ್ಲಾ ಸೆಪ್ಟೆಂಬರ್ 17 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಅಭಿಷೇಕ್ ರೆಡ್ಡಿ ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರೆದು ಪೊಲೀಸರು ಶಂಕಿಸಿದ್ದಾರೆ. ಅಕ್ಟೋಬರ್ 5 ರಂದು, ಕಚೇರಿಯಿಂದ ಗುಲ್ಲಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿತ್ತು. ಅಕ್ಟೋಬರ್ 6 ರಂದು ಅವರು ಕಚೇರಿಗೆ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದರು. ಆದರೆ ಅವರು ಕಚೇರಿಗೆ ಬರಲಿಲ್ಲ ಎಂದು ಹೇಳಿದ್ದಾರೆ.