ತಿರುವನಂತಪುರ: ಕೇರಳದ ಆಕರ್ಷಣೆಯಾಗಿರುವ ವಿಹಂಗಮ ಕಡಲ ತೀರಗಳು ಭಾನುವಾರದಿಂದ ಪ್ರವಾಸಿಗರ ಭೇಟಿಗೆ ಮುಕ್ತವಾಗಲಿವೆ.
ಕೋವಿಡ್ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಬೀಚ್‌ಗಳಿಗೆ ಸ್ಥಳೀಯರು ಹಾಗೂ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿತ್ತು.
ಕೋವಿಡ್‌ನಿಂದಾಗಿ ಕೇರಳದ ಪ್ರವಾಸೋದ್ಯಮದ ಮೇಲೆ ಮಂಕು ಕವಿದಿತ್ತು. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮೊದಲ ಹಂತದ ಅನ್‌ಲಾಕ್ (ಅ.12ರಿಂದ) ವೇಳೆ ಸರ್ಕಾರವು ಗಿರಿಧಾಮಗಳು, ಸಾಹಸ ಕ್ರೀಡೆಗಳನ್ನು ನಡೆಸುವ ರೆಸಾರ್ಟ್‌ಗಳು ಮತ್ತು ಹೌಸ್ ಬೋಟ್‌ಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತ್ತು.
'ಕೇರಳ ಪಿರಾವಿ ದಿನದ (ಕೇರಳ ದಿನ) ಹಿನ್ನೆಲೆಯಲ್ಲಿ ನಾಳೆ(ನ.1)ಯಿಂದ ಬೀಚ್ ಪ್ರವಾಸೋದ್ಯಮಕ್ಕೆ ಸರ್ಕಾರವು ಹಸಿರು ನಿಶಾನೆ ತೋರಿದೆ. ಇದು ರಜೆ ಕಾಲವಾಗಿರುವುದರಿಂದ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಇದರಿಂದ ಹೆಚ್ಚಿನ ಆದಾಯವೂ ಹರಿದು ಬರುವ ನಿರೀಕ್ಷೆ ಇದೆ' ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.
'ಪ್ರವಾಸಿಗರು ಕಡಲ ತೀರಗಳಿಗೆ ಭೇಟಿ ನೀಡುವುದಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮವು ಸ್ವಾಗತಾರ್ಹ ವಾದುದು. ಇದರಿಂದ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಬೀಚ್ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಿಗೆ ಬಲ ಬಂದಂತಾಗಿದೆ' ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್‌ನ (ಐಎಟಿಒ) ಹಿರಿಯ ಉಪಾಧ್ಯಕ್ಷ ಇ.ಎಂ.ನಜೀಬ್ ತಿಳಿಸಿದ್ದಾರೆ.