ಮಂಜೇಶ್ವರ: ಮೂರು ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸ ಹೊಂದಿರುವ ತುಳು ಭಾಷಾ ಲಿಪಿಯ ತಾಳೆಗರಿಗಳನ್ನು ಪತ್ತೆ ಮಾಡಿ, ಸಾರ್ವಜನಿಕ ವಲಯಕ್ಕೆ ಬಲುದೊಡ್ಡ ಕೊಡುಗೆಯ ರೂಪದಲ್ಲಿ ತುಳು ಅಕ್ಷರಮಾಲೆಯ ಪಠ್ಯಪುಸ್ತಕ ಪ್ರಕಟಿಸಿ, ಕಲಿಕೆಗೆ ಅವಕಾಶ ಒದಗಿಸಿದ, ಹಿರಿಯ ಸಂಶೋಧಕ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅವರ ಜನ್ಮದಿನ ಶನಿವಾರ ಜರಗಿತು.
ಕೇರಳ ತುಳು ಅಕಾಡೆಮಿ ಆಶ್ರಯದಲ್ಲಿ ಹೊಸಂಗಡಿ ಬಳಿಯ ದುರ್ಗಿಪಳ್ಳದ ತುಳುಭವನದಲ್ಲಿ ಈ ಸಮಾರಂಭ ನಡೆಯಿತು. ಡಾ.ವೆಂಕಟರಾಜ ಪುಣಿಂಚತ್ತಾಯ ಅವರ ಭಾವಚಿತ್ರ ಅನಾವರಣ ಈ ವೇಳೆ ಜರಗಿತು.
ತುಳು ಮಹಾಕಾವ್ಯ ಶ್ರೀ ಮಹಾ ಭಾಗವತೊ, ಕಾವೇರಿ, ಗದ್ಯ ಗ್ರಂಥ ದೇವಿ ಮಹಾತ್ಮೆ, ಮಹಾಭಾರತ ಕಾವ್ಯೊ ಸಹಿತ ಗ್ರಂಥಗಳ ಸಂಶೋಧನೆಯನ್ನು ನಡೆಸಿದ ಆ ಮಹಾನ್ ಸಾಧಕನನ್ನು ಗರಿಮೆಯೊಂದಿಗೆ ಸ್ಮರಿಸಲಾಯಿತು. ಮಾಜಿ ಶಾಸಕ ಸಿ.ಎಚ್.ಕುಂಞಂಬು ಸಮಾರಂಭವನ್ನು ಉದ್ಘಾಟಿಸಿ, ಸಂಸ್ಮರಣೆ ನಡೆಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಡಾ.ವೆಂಕಟರಾಜ ಪುಣಿಂಚಿತ್ತಾಯ ಅವರ ನಾಮಧೇಯದಲ್ಲಿ ಪ್ರತಿ ವರ್ಷ ಪ್ರದಾನ ನಡೆಸಲು ನಿರ್ಧರಿಸಿರುವ ಪ್ರಶಸ್ತಿಯನ್ನು ಈ ಬಾರಿ , ಖ್ಯಾತ ಬರಹಗಾರ ಸುಂದರ ಬಾರಡ್ಕ ಅವರಿಗೆ ನೀಡಲಾಯಿತು. ವಿಶ್ವ ದಾಖಲೆ ಪಡೆದ ಪ್ರತಿಭಾವಂತ, 5ನೇ ತರಗತಿ ವಿದ್ಯಾರ್ಥಿನಿ ಅಭಿಜ್ಞಾ , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ ಕೃಷ್ಣ ಶೆಟ್ಟಿಗಾರ್, ಗಂಗಾಧರ್ ಮೊದಲಾವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಬಾಲಕೃಷ್ಣ ಶೆಟ್ಟಿಗಾರ್, ರವೀಂದ್ರ ರೈ ಮಲ್ಲಾವರ, ಪ್ರದೀಪ್ ಕುಮಾರ್, ಭಾರತೀ ಬಾಬು ಮೊದಲಾದವರು ಉಪಸ್ಥಿತರಿದ್ದರು. ಗೀತಾ ಸಾಮಾನಿ ಸ್ವಾಗತಿಸಿ, ರಾಮಕೃಷ್ಣ ಕಡಂಬಾರು ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಕುದ್ರು ವಂದಿಸಿದರು.