ರಾಯಪುರ್: ತನ್ನ ಕಾರ್ಯಕರ್ತರನ್ನು ಜನಸಾಮಾನ್ಯರಿಗೆ ತಲುಪಿಸಲು ಹೆಣಗಾಡುತ್ತಿರುವ ಸಿಪಿಐ(ಮಾವೋವಾದಿ) ಕಾನೂನು ಬಾಹಿರ ಸಂಘಟನೆಗೆ ಈಗ ಆಂತರಿಕ ಭಿನ್ನಾಭಿಪ್ರಾಯ ಹತ್ತಿಕ್ಕುವ ಹೊಸ ಸವಾಲು ಎದುರಿಸುತ್ತಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ, ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಗಂಗಲೂರು ಪ್ರದೇಶ ಸಮಿತಿಯ(ಬಿಜಾಪುರ) ಉಸ್ತುವಾರಿ, ಹಿರಿಯ ಮಾವೋವಾದಿ ನಾಯಕ ಮತ್ತು ವಿಭಾಗೀಯ ಸಮಿತಿ ಸದಸ್ಯ ಮೋಡಿಯಂ ವಿಜ್ಜಾ(39) ಅವರು ತಮ್ಮ ಕಾರ್ಯಕರ್ತರಿಂದಲೇ ಹತ್ಯೆಯಾಗಿದ್ದಾರೆ.
ದಕ್ಷಿಣ ಛತ್ತೀಸ್‌ಢದ ಕಲಹ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಮಾವೋ ಕಾರ್ಯಕರ್ತರು ತಮ್ಮ ನಾಯಕನನ್ನೇ ಹತ್ಯೆ ಮಾಡಿದ್ದಾರೆ.
ಸ್ಥಳೀಯ ಗುಪ್ತಚರ ಮಾಹಿತಿಯ ಪ್ರಕಾರ, ಬಂಡುಕೋರರು ಇತ್ತೀಚೆಗೆ ನಡೆಸಿದ ನಾಗರಿಕರ ಹತ್ಯೆಯ ಕಾರಣದಿಂದ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಬಜಾರ್ ಪೊಲೀಸರು ಹೇಳಿದ್ದಾರೆ. ಈ ಮಾವೋ ನಾಯಕನ ಹತ್ಯೆಗೆ ಪೊಲೀಸರು 8 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಆದರೆ ಈಗ ತನ್ನ ಕಾರ್ಯಕರ್ತರಿಂದಲೇ ಹತ್ಯೆಯಾಗಿದ್ದಾರೆ.
“ನಮ್ಮ ಮಾಹಿತಿಯ ಪ್ರಕಾರ, ನಾಗರಿಕ ಹತ್ಯೆಗಳು ಮತ್ತು ಬಿಜಾಪುರದಲ್ಲಿ ಗ್ರಾಮಸ್ಥರ ರ್ಯಾಲಿಗಳನ್ನು ಆಯೋಜಿಸುವುದರ ಹಿಂದೆ ವಿಜ್ಜಾ ಮಾವೋವಾದಿ ನಾಯಕನ ಕೈವಾಡ ಇತ್ತು. ಮುಗ್ಧ ಬುಡಕಟ್ಟು ಜನಾಂಗದವರ ವಿರುದ್ಧದ ಹಿಂಸಾಚಾರವನ್ನು ಮಾವೋ ಕಾರ್ಯಕರ್ತರು ವಿರೋಧಿಸಿದ್ದರು. ಈ ಸಂಬಂಧ ನಾಯಕ ಮತ್ತು ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಅಂತಹ ಭಯೋತ್ಪಾದಕ ತಂತ್ರಗಳು ಮಾವೋವಾದಿಗಳಿಗೆ ಸಹಾಯ ಮಾಡುತ್ತಿಲ್ಲವೆಂದು ತೋರುತ್ತದೆ. ಈ ಕುರಿತು ನಾವು ತನಿಖೆ ನಡೆಸುತ್ತೇವೆ” ಎಂದು ಬಸ್ತಾರ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರ್‌ರಾಜ್ ಪಿ ಹೇಳಿದ್ದಾರೆ.