ಬದಿಯಡ್ಕ: ಬದಿಯಡ್ಕ ಠಾಣೆಯಲ್ಲಿ ಇನ್ಸ್‍ಫೆಕ್ಟರ್ ಆಫ್ ಪೋಲೀಸ್(ಐ.ಪಿ) ಆಗಿ ಕರ್ತವ್ಯದಲ್ಲಿದ್ದು ಬೇಕಲ ಠಾಣೆಗೆ ವರ್ಗಾವಣೆಗೊಂಡ, ಜನಪರ ಅಧಿಕಾರಿಯೆಂದೇ ಹೆಸರುಪಡೆದ ಅನಿಲ್ ಕುಮಾರ್ ಅವರಿಗೆ ಭಾನುವಾರ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ವತಿಯಿಂದ ಹೃದಯಂಗಮ ಬೀಳ್ಕೊಡುಗೆ ನಡೆಯಿತು.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪೋಲೀಸ್ ಅಧಿಕಾರಿಯನ್ನು ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಸುಬ್ರಹ್ಮಣ್ಯ ಭಟ್ ಅವರು ಗ್ರಾಮೀಣ ಪ್ರದೇಶವಾದ ನೀರ್ಚಾಲು ಪರಿಸರದ ಶಾಂತಿ-ಸೌಹಾರ್ಧತೆಯನ್ನು ಕಾಪಿಡುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅನಿಲ್ ಕುಮಾರ್ ಅವರ ವಿಶಿಷ್ಟ ಸೇವೆ ಗಮನಾರ್ಹವಾದುದು. ಪೇಟೆಯಲ್ಲಿ ನಿರ್ಮಿಸಲಾದ ಸಿ.ಸಿ.ಕ್ಯಾಮರಾ ವ್ಯವಸ್ಥೆಯ ಸಾಕಾರತೆಗೆ ಅವರು ನೀಡಿದ ಮಾರ್ಗದರ್ಶನ ಅಪೂರ್ವವಾದುದು ಎಂದು ತಿಳಿಸಿದರು.
ಈ ಸಂದರ್ಭ ಅಭಿನಂದನೆ ಸ್ವೀಕರಿಸಿದ ಐ.ಪಿ. ಅನಿಲ್ ಕುಮಾರ್ ಅವರು, ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಉತ್ತಮ ರೀತಿಯ ಸೇವಾ ತತ್ಪರತೆಯಲ್ಲಿ ಕಾರ್ಯನಿರ್ವಹಿಸುವ ವ್ಯಾಪಾರಿ ಘಟಕದ ಚಟುವಟಿಕೆ ಮಾದರಿಯಾದುದು. ಜನಸಾಮಾನ್ಯರ ಒಗ್ಗಟ್ಟಿನ ಸೌಹಾರ್ಧತೆ ಇನ್ನಷ್ಟು ಬೆಳೆದುಬರಲಿ ಎಂದು ಹಾರೈಸಿದರು.
ವ್ಯಾಪಾರಿ ಘಟಕದ ಉಪಾಧ್ಯಕ್ಷ ನಾರಾಯಣ ಇ., ಪದಾಧಿಕಾರಿಗಳಾದ ವಿಶ್ವನಾಥ ಶರ್ಮ, ಗೋಪಾಲಕೃಷ್ಣ ಭಟ್ ಎಸ್.ಕೆ, ಗಣೇಶ ಕೃಷ್ಣ ಅಳಕ್ಕೆ, ಶಾಫಿ, ರವಿಶಂಕರ, ಉದಯ ಕಂಬಾರ್ ಮೊದಲಾದವರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ರವಿ ನೀರ್ಚಾಲು ಸ್ವಾಗತಿಸಿ, ವಂದಿಸಿದರು.