ಬದಿಯಡ್ಕ: ವಿಶ್ವಹಿರಿಯ ನಾಗರಿಕರ ದಿನಾಚರಣೆ ಹಾಗೂ ಗಾಂಧಿಜಯಂತಿ ಕಾರ್ಯಕ್ರಮವು ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ಬದಿಯಡ್ಕ ಹಗಲು ಮನೆಯಲ್ಲಿ ಶುಕ್ರವಾರ ಜರಗಿತು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ, ವಯೋಜನರ ಸದುಪಯೋಗಕ್ಕಾಗಿ ನಿರ್ಮಾಣಗೊಂಡ ಹಗಲು ಮನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಇಂತಹ ಸಂಘಟನೆಗಳು ಸರ್ಕಾರದಿಂದ ಲಭಿಸುತ್ತಿರುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿವೆ ಎಂದು ತಿಳಿಸುತ್ತಾ ಮಹಾತ್ಮಾಗಾಂಧಿಯವರ ಆಶಯಗಳನ್ನು ತಮ್ಮ ಮಾತುಗಳಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಸಂಪತ್ತಿಲ ಈಶ್ವರ ಭಟ್ ಮಾತನಾಡಿ, ಇಂದು ಇಬ್ಬರು ಮಹಾತ್ಮರ ಜನ್ಮದಿನವಾಗಿದೆ. ನುಡಿದಂತೆ ನಡೆ, ನಡೆದಂತೆ ನುಡಿ ಎನ್ನುವ ಆಶಯವನ್ನು ಎತ್ತಿ ಹಿಡಿದ ಮಹಾತ್ಮಾ ಗಾಂಧಿಯವರು ಜನಜೀವನದ ಕೊಳಕನ್ನು ನಿವಾರಿಸಲು ಪಣತೊಟ್ಟಿದ್ದರು. ವಿಶ್ವದಲ್ಲಿಯೇ ಮಹಾತ್ಮ ರಾದ ಗಾಂಧೀಜಿಯವರ ಕನಸನ್ನು ನನಸಾಗಿಸುವತ್ತ ನಮ್ಮ ಗಮನವಿರಲಿ ಎಂದು ಶುಭಕೋರಿದರು. ಬದಿಯಡ್ಕ ಗ್ರಾಪಂ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹಾಗೂ ಸರ್ಕಾರದಿಂದ ಲಭಿಸುವ ಸವಲತ್ತುಗಳನ್ನು ಹಿರಿಯ ನಾಗರಿಕರಿಗೆ ಸಮರ್ಪಕವಾಗಿ ತಲುಪಿಸುತ್ತಿರುವ ಬ್ಯಾಂಕ್ ಉದ್ಯೋಗಿ ರಾಜನ್ ಮುನಿಯೂರು ಅವರನ್ನು ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಸ್ವಾಗತಿಸಿ, ಸಂಪತ್ತಿಲ ಶಂಕರನಾರಾಯಣ ಭಟ್ ವಂದಿಸಿದರು. ಈಶ್ವರ ಭಟ್ ಪೆರ್ಮುಖ ನಿರೂಪಿಸಿದರು. ಹಿರಿಯ ನಾಗರಿಕರ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.