ನವದೆಹಲಿ: ಮಹಿಳೆಯರಿಗೆ ಮ್ಯಾಟರ್ನಿಟಿ ಲೀವ್ (ಹೆರಿಗೆ ರಜೆ) ಸೌಲಭ್ಯ ಇರುವಂತೆ ಪುರುಷರಿಗೂ ಪ್ಯಾಟರ್ನಿಟಿ ಲೀವ್ ಸೌಲಭ್ಯ ನೀಡಬೇಕೆಂಬ ಕೂಗ ಬಹಳ ಕಡೆ ಕೇಳಿಬರುತ್ತಿದೆ. ಕೆಲ ಕಂಪನಿಗಳು ಈ ಸೌಲಭ್ಯವನ್ನ ಒದಗಿಸುತ್ತಿದೆ. ಕೇಂದ್ರ ಸರ್ಕಾರ ಕೂಡ ತನ್ನ ಪುರುಷ ನೌಕರರಿಗೆ ಇಂಥದ್ದೊಂದು ಸೌಲಭ್ಯ ನೀಡಲು ಮುಂದಾಗಿದೆ. ಮಗು ಪಾಲನೆ ರಜೆ (ಸಿಸಿಎಲ್ - ಚೈಲ್ಡ್ ಕೇರ್ ಲೀವ್) ಅವಕಾಶವನ್ನ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಸಚಿವ ಡಾ. ಜಿತೇಂದ್ರ ಸಿಂಗ್ ಈ ವಿಚಾರ ತಿಳಿಸಿದ್ದಾರೆ.
ಚೈಲ್ಡ್ ಕೇರ್ ಲೀವ್ ಎಲ್ಲ ಅಪ್ಪಂದಿರಿಗಲ್ಲ. ಒಂಟಿ ಅಪ್ಪಂದಿರಿಗೆ ಮಾತ್ರ. ಅಂದರೆ, ವಿದುರರಾಗಿರುವ, ವಿಚ್ಛೇದಿತಗೊಂಡಿರುವ, ಅವಿವಾಹಿತರಾಗಿರುವ ಅಪ್ಪಂದಿರಿಗೆಂದು ಈ ಸೌಲಭ್ಯ ನೀಡಲಾಗಿದೆ. ಹೆಂಗಸಿನ ಅನುಪಸ್ಥಿತಿಯಲ್ಲಿ ಮಗುವಿನ ಪಾಲನೆ ಮಾಡುವ ಹೊಣೆಗಾರಿಕೆ ಇರುವ ಅಪ್ಪಂದಿರಿಗಾಗಿ ಈ ರಜೆ ಸೌಲಭ್ಯ ಇದೆ. ಆದರೆ, ಮಗು ಪಾಲನೆ ರಜೆ ವರ್ಷಕ್ಕೆ ಎಷ್ಟು ದಿನ ಎಂಬ ಮಾಹಿತಿ ಗೊತ್ತಾಗಿಲ್ಲ. ಆದರೆ, ಮೊದಲ ವರ್ಷ ಇದು ಪೇಯ್ಡ್ ಲೀವ್ ಆಗಿರಲಿದೆ. ಎರಡನೇ ವರ್ಷ ಶೇ. 80ರಷ್ಟು ಸಂಬಳದೊಂದಿಗೆ ರಜೆ ಸಿಗುತ್ತದೆ. ಮಗು ಅಂಗವೈಕಲ್ಯಗೊಂಡಿದ್ದರೆ ಎಷ್ಟು ವರ್ಷದವರೆಗೆ ಬೇಕಾದರೂ ಈ ರಜೆಯ ಸೌಲಭ್ಯ ಇರಲಿದೆ.