ಬದಿಯಡ್ಕ: ಒನ್ ಇಂಡಿಯಾ ಒನ್ ಪೆನ್ಶನ್ ಆಶಯದೊಂದಿಗೆ ರೂಪುಗೊಂಡ ಒಐಒಪಿ ಸಂಘಟನೆಯ ವತಿಯಿಂದ ಬದಿಯಡ್ಕದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಾಗೂ ಧ್ವಜದಿನವನ್ನು ಗುರುವಾರ ಆಚರಿಸಲಾಯಿತು.
ಸಂಘಟನೆಯ ಪಂ.ಸಮಿತಿ ಅಧ್ಯಕ್ಷ ಅಪ್ಪುರಾಜ್ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾಸಮಿತಿ ಜತೆ ಕಾರ್ಯದರ್ಶಿ ಸಾಜಿ ಪಟ್ನಮಕ್ಕಲ್ ಪ್ರತಿಜ್ಞೆ ಬೋಧಿಸಿ ಊರಿನ ಎಲ್ಲಾ ಜನರಿಗೂ ಒನ್ ಇಂಡಿಯಾ ಒನ್ ಪೆನ್ಶನ್ ಆಶಯವನ್ನು ತಲುಪಿಸುವ ಮಹತ್ತರವಾದ ಜವಾಬ್ದಾರಿಯನ್ನು ಎಲ್ಲಾ ಸದಸ್ಯರೂ ವಹಿಸಿಕೊಳ್ಳಬೇಕು ಎಂದು ಕರೆಯಿತ್ತರು. ಇದೇ ಸಂದರ್ಭದಲ್ಲಿ ತನ್ನ ವೃದ್ಧಾಪ್ಯದಲ್ಲಿಯೂ ಜೀವನೋಪಾಯಕ್ಕಾಗಿ ಮೀನು ಮಾರಾಟ ಮಾಡುತ್ತಿರುವ ಸುಂದರಿ ಅಮ್ಮ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಹಾಜಿ, ಕೃಷ್ಣನ್ ಕೆ.ಕೆ., ಜೋಸ್ ಪಣಿಕ್ಕರ್, ಶಂಸುದ್ದೀನ್ ಶುಭಾಶಂಸನೆಗೈದರು. ಕಾರ್ಯದರ್ಶಿ ಜೋಸ್ ಕುಟ್ಟಿ ಸ್ವಾಗತಿಸಿ, ಖಚಾಂಜಿ ಬಿಜು ಅಬ್ರಹಾಂ ವಂದಿಸಿದರು.