ಬೆಂಗಳೂರು: ಸನಾತನ ಹಿಂದೂ ಧರ್ಮವನ್ನು ಬಲಪಡಿಸುವ ಸಲುವಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುರೋಹಿತರು ಎಲ್ಲ ಜಾತಿಗೆ ಸೇರಿದವರಿಗೂ ಸಾಂಸ್ಕೃತಿಕ ಸಂಸ್ಕಾರ ನೀಡಲು ನಿರ್ಧರಿಸಿದ್ದಾರೆ.
ಸನಾತನ ಹಿಂದೂ ಧರ್ಮವನ್ನು ಬಲಪಡಿಸುವ ಸಲುವಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುರೋಹಿತರು ಎಲ್ಲಜಾತಿಗೆ ಸೇರಿದವರಿಗೂ ಸಾಂಸ್ಕೃತಿಕ ಸಂಸ್ಕಾರವನ್ನು ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ನಗರದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ತಿನ ಪ್ರಥಮ ಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಅಂಥಹ ಸಾಂಸ್ಕೃತಿಕ ಉಪದೇಶ ಶಿಬಿರಗಳನ್ನು ರಾಜ್ಯದ ಎಲ್ಲ ಹೋಬಳಿ ಮಟ್ಟದಲ್ಲಿ ನಡೆಸಲೂ ತೀರ್ಮಾನಿಸಲಾಗಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ತು ದೇವಾಲಯಗಳಲ್ಲಿ ಪೂಜೆ ನೆರವೇರಿಸುವ ಅರ್ಚಕರ ಮತ್ತು ಮನೆಗಳಿಗೆ ತೆರಳಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಡುವ ಪುರೋಹಿತರುಗಳ ಸರ್ವೋನ್ನತ ಸಂಸ್ಥೆಯಾಗಿದೆ. ಈ ವಿಷಯ ಕುರಿತಂತೆ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ತಿನ ಹಿರಿಯ ಉಪಾಧ್ಯಕ್ಷ ಡಾ. ಬಿ.ಎಸ್. ರಾಘವೇಂದ್ರ ಭಟ್, ಸನಾತನ ಧರ್ಮವನ್ನು ಸಂರಕ್ಷಿಸುವ ಸಲುವಾಗಿ ಎಲ್ಲ ಜಾತಿಯ ಜನರನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅವರ ಬಲವರ್ಧನೆ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ ಎಂದು ಹೇಳಿದರು.
“ಕೆಲವು ಜಾತಿಯ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಅವರ ಆರ್ಥಿಕ ಸ್ಥಿತಿಯೂ ಒಂದು ಕಾರಣವಾಗಿದೆ. ಇದಕ್ಕೆ ಮತ್ತೊಂದು ಕಾರಣವೇನೆಂದರೆ ಆ ವರ್ಗದ ಸೋದರರನ್ನು ಧಾರ್ಮಿಕ ವಿಧಿಗಳಿಂದ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಇಟ್ಟಿರುವುದಾಗಿದೆ. ನಾವು ಈ ಮತಾಂತರದ ವಿನಾಶಕಾರಿ ಅಭ್ಯಾಸವನ್ನು ನಿಲ್ಲಿಸಬೇಕಾಗಿದೆ ಮತ್ತು ಹೀಗಾಗಿ ಎಲ್ಲ ಜಾತಿಯ ಜನರಿಗೂ ನಾವು ಸಾಂಸ್ಕೃತಿಕ ಸಂಸ್ಕಾರವನ್ನು ನೀಡುವ ಮೂಲಕ ಅವರನ್ನು ಸನಾತನ ಧರ್ಮದ ಒಳಕ್ಕೆ ಅರ್ಥಪೂರ್ಣವಾಗಿ ತರಬೇಕಾಗಿದೆ ”ಎಂದು ಡಾ.ರಾಘವೇಂದ್ರ ಭಟ್ ವಿವರಿಸಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದಲೇ ವಿಮಾ ಕಂತು ಪಾವತಿ
ಉದ್ಘಾಟನಾ ಭಾಷಣದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, ಎಲ್ಲ ಅರ್ಚಕರಿಗೆ ಮತ್ತು ಪುರೋಹಿತರಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದಲೇ ವಿಮಾ ಕಂತು ಪಾವತಿಸುವ ಮೂಲಕ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದಾಗಿ ಪ್ರಕಟಿಸಿದರು.