ಕೊಚ್ಚಿ: ಕಾಸರಗೋಡು ಜಿಲ್ಲೆಯನ್ನು ನಡುಗಿಸಿರುವ ಪೆರಿಯದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಕೇರಳ ಸರ್ಕಾರ ಮತ್ತು ಸಿಬಿಐ ಮಧ್ಯೆ ಹಗ್ಗಜಗ್ಗಾಟ ಆರಂಭಗೊಂಡಿದೆ. ಕೇಸ್ ಡೈರಿ ಸೇರಿ ಅಗತ್ಯ ದಾಖಲೆಗಳನ್ನು ಕ್ರೈಂಬ್ರಾಂಚ್ ಹಸ್ತಾಂತರಿಸದಿರುವುದರಿಂದ ಸಿಬಿಐ, ಕೇರಳ ಸರ್ಕಾರದ ವಿರುದ್ಧ ಬಿಗು ನಿಲುವು ಕೈಗೊಳ್ಳಲು ಮುಂದಾಗಿದೆ.
ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ಪರಿಗಣಿಸುವ ಸಂದರ್ಭ, ಪ್ರಸಕ್ತ ಕೇಸಿನ ವಿಜಿಲೆನ್ಸ್ ಡೈರಿ ಹಸ್ತಾಂತರಿಸದಿರುವುದರಿಂದ ವಿಚಾರಣೆ ಮುಂದುವರಿಸಲು ಅಡಚಣೆಯುಂಟಾಗುತ್ತಿರುವುದಾಘಿ ಸಿಬಿಐ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಪ್ರಕರಣ ಸಿಬಿಐಗೆ ವಹಿಸಿಕೊಡುವಂತೆ ಹೈಕೋರ್ಟು ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಅಪೀಲು ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೇಸ್ ಡೈರಿ ಸಿಬಿಐಗೆ ಹಸ್ತಾಂತರಿಸಲಾಗದು ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದಾರೆ. ಸುಪ್ರೀಂ ಕೋರ್ಟು ತೀರ್ಪು ಬರುವ ಮೊದಲು ಕೇಸ್ ಡೈರಿ ಬೇಕಾಗಿದ್ದಲ್ಲಿ, ಸಿಬಿಐ ಸುಪ್ರೀಂ ಕೋರ್ಟಿಗೇ ಅರ್ಜಿ ಸಲ್ಲಿಸಬೇಕು. ಕೇಸಿನ ವಿಶೇಷತೆ ಪರಿಗಣಿಸಿ ಸುಪ್ರೀಂ ಕೋರ್ಟಿನ ತೀರ್ಪು ಬರುವಲ್ಲಿ ವರೆಗೆ ಕೇಸ್ ಡೈರಿಯನ್ನು ಹೈಕೋರ್ಟು ವಶದಲ್ಲಿಸುವಂತೆಯೂ ಸಿಬಿಐ ಮನವಿಮಾಡಿದ್ದು, ನ್ಯಾಯಾಲಯ ಸೂಚಿಸಿದಲ್ಲಿ, ಡೈರಿ ಒಪ್ಪಿಸಲು ತಯಾರಿರುವುದಾಗಿ ಸರ್ಕಾರ ತಿಳಿಸಿದೆ.
2019 ಫೆಬ್ರವರಿ 17ರಂದು ಕಾಸರಗೋಡು ಪೆರಿಯ ಕಲ್ಯೋಟ್‍ನ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್(24)ಹಾಗೂ ಕೃಪೇಶ್(21) ಅವರನ್ನು ತಂಡವೊಂದು ಬರ್ಬರವಾಗಿ ಹತ್ಯೆಗೈದಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಏರಿಯಾ, ಸ್ಥಳೀಯ ಕಾರ್ಯದರ್ಶಿಗಳು, ಕಾರ್ಯಕರ್ತರು ಒಳಗೊಂಡಂತೆ 14ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಯುವಕರಿಬ್ಬರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವಂತೆ ಕೊಲೆಯಾದ ಯುವಕರ ತಂದೆ ಮತ್ತು ತಾಯಂದಿರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು.