ಎರ್ನಾಕುಳಂ: ಭೆಲ್-ಇಎಂಎಲ್ ಸಂಸ್ಥೆಗಳ ವಿಲೀನ ಪ್ರಕ್ರಿಯೆಯಲ್ಲಿನ ಗೊಂದಲ ಮೂರು ತಿಂಗಳೊಳಗೆ ಪರಿಹರಿಸುವಂತೆ ಕೇರಳ ಹೈಕೋರ್ಟು ಸಂಬಂಧಪಟ್ಟವರಿಗೆ ಆದೇಶಿಸಿದೆ. 2016ರಲ್ಲಿ ಕಂಪೆನಿಯಲ್ಲಿನ ಶೇ. 51ರಷ್ಟು ಪಾಲುಬಂಡವಾಳವನ್ನು ಬಿಟ್ಟುಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿ, ಶೇ. 41 ಶೇರು ಹೊಂದಿರುವ ಕೇರಳ ಸರ್ಕಾರಕ್ಕೆ ಪತ್ರ ಬರೆದಿತ್ತು.
ಕೇಂದ್ರ ಸರ್ಕಾರದ ಶೇರು ಪಡೆದುಕೊಂಡು ಸಂಪೂರ್ಣ ಕೇರಳ ಸರ್ಕಾರಿ ಸ್ವಾಮ್ಯಕ್ಕೆ ಸಂಸ್ಥೆಯನ್ನು ಪಡೆದು ಮುನ್ನಡೆಸಲು ಕೇರಳ ಸರ್ಕಾರ ತೀರ್ಮಾನಿಸಿದ್ದರೂ, ಕಳೆದ ಎರಡುವರೆ ವರ್ಷಗಳಿಂದ ಯಾವುದೇ ಪ್ರಗತಿ ಕಾಣಲಾಗಿಲ್ಲ. ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಲು ವಿಳಂಬ ಮಾಡುತ್ತಿರುವುದಾಗಿ ಕೇರಳ ಸರ್ಕಾರ ದೂರಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆ ಎಸ್.ಟಿಯು ಹೈಕೋರ್ಟಿಗೆ ದೂರು ಸಲ್ಲಿಸಿತ್ತು. ಕಳೆದ ಮೂರು ವರ್ಷಗಳಿಂದ ಉತ್ಪಾದನೆ ಸ್ಥಗಿತಗೊಂಡಿದ್ದು, ವೇತನವೂ ಸರಿಯಾಗಿ ಕೈಗೆ ಲಭಿಸದೆ ಇಲ್ಲಿನ ಸಿಬ್ಬಂದಿ ಅತಂತ್ರಾವಸ್ಥೆಯಲ್ಲಿ ಮುಂದುವರಿಯುತ್ತಿದ್ದಾರೆ.