ಕಾಸರಗೋಡು: ಟಿಪ್ಪರ್‍ಲಾರಿಗಳಲ್ಲಿ ಅತಿಯಾದ ಭಾರ ಹೇರಿಕೊಂಡು ಸಂಚಾರ ನಡೆಸುತ್ತಿರುವ ಆರೋಪದಲ್ಲಿ ಕಂದಾಯ ಹಾಗೂ ಭೂಗರ್ಭ ಇಲಾಖೆ ಹಗಲು ದರೋಡೆ ನಡೆಸುತ್ತಿರುವುದಾಗಿ ಆರೋಪಿಸಿ ಟಿಪ್ಪರ್ ಲಾರಿ ಮಾಲಕರ ಹಾಗೂ ಚಾಲಕರ ಸಂಘಟನೆ ವತಿಯಿಂದ ಕಾಸರಗೋಡಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ನೂರಾರು ಟಿಪ್ಪರ್ ಲಾರಿಗಳನ್ನು ನಾಯಮರ್‍ಮೂಲೆಯಿಂದ ವಿದ್ಯಾನಗರ ವರೆಗೆ ರಸ್ತೆಬದಿ ಟಿಪ್ಪರ್‍ಲಾರಿಗಳನ್ನು ನಿಲ್ಲಿಸಿ, ಮಾಲಿಕರು ಮತ್ತು ಚಾಲಕರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಅತಿಯಾದ ಭಾರ ಹೇರಿಕೆಗೆ ಸಂಬಂಧಿಸಿ ಭಾರಿ ಪ್ರಮಾಣದಲ್ಲಿ ದಂಡ ವಸೂಲಿಮಾಡುವ ಮೂಲಕ ಟಿಪ್ಪರ್‍ಲಾರಿ ಉದ್ದಿಮೆಯನ್ನು ಬುಡಮೇಲುಗೊಳಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಇಂತಹ ಕ್ರಮದಿಂದ ಇಲಾಖೆ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಂಜೇಶ್ವರ, ನೀಲೇಶ್ವರ, ಪೊಯಿನಾಚಿ, ಕಾಞಂಗಾಡು, ವೆಳ್ಳರಿಕುಂಡಿನಲ್ಲೂ ಸಾಂಕೇತಿಕ ಪ್ರತಿಭಟನೆ ನಡೆಯಿತು.