ನವದೆಹಲಿ: ಹೊಸ ಬೆಳವಣಿಗೆಯಲ್ಲಿ, ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌನ ಬೇಜವಾಬ್ದಾರಿಯುತ ವರದಿಯ ವಿರುದ್ಧ ಪ್ರಮುಖ ಬಾಲಿವುಡ್ ನಿರ್ಮಾಪಕರು ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಶಾರುಕ್ ಖಾನ್, ಆಮಿರ್ ಖಾನ್, ಯಶ್ ರಾಜ್ ಹಾಗೂ ಕರಣ್ ಜೋಹರ್ ಸೇರಿದಂತೆ 34 ಬಾಲಿವುಡ್ ನಿರ್ಮಾಪಕರು ಮತ್ತು ನಾಲ್ಕು ಚಿತ್ರೋದ್ಯಮ ಸಂಘಟನೆಗಳು ರಿಪ್ಲಬಿಕ್ ಟಿವಿ ಮತ್ತು ಟೈಮ್ಸ್ ನೌ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಾಲಿವುಡ್ ಮತ್ತು ಅದರ ಸದಸ್ಯರ ವಿರುದ್ಧ ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ಚಿತ್ರೋದ್ಯಮದವರನ್ನು ವಿವಿಧ ವಿಷಯಗಳ ಕುರಿತ ಮಾಧ್ಯಮ ವಿಚಾರಣೆಯನ್ನು ನಿಲ್ಲಿಸಬೇಕು ಎಂದು ಕೋರಲಾಗಿದೆ.
ಈ ಸಂಬಂಧ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ವರದಿಗಾರ ಪ್ರದೀಪ್ ಭಂಡಾರಿ ಮತ್ತು ಟೈಮ್ಸ್ ನೌನ ಪತ್ರಕರ್ತರಾದ ರಾಹುಲ್ ಶಿವಶಂಕರ್ ಹಾಗೂ ನವಿಕಾ ಕುಮಾರ್ ಅರಿಗೆ ನಿರ್ದೇಶನ ನೀಡಬೇಕು ಎಂದು ಬಾಲಿವುಡ್ ನಿರ್ಮಾಪಕರು ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಡಿಎಸ್‌ಕೆ ಕಾನೂನು ಸಂಸ್ಥೆಯ ಮೂಲಕ ಮೊಕದ್ದಮೆ ದಾಖಲಿಸಲಾಗಿದ್ದು, ಈ ಚಾನೆಲ್‌ಗಳು ಬಾಲಿವುಡ್‌ಗೆ 'ಕೊಳಕು', 'ಹೊಲಸು', 'ಕಲ್ಮಷ', 'ಡ್ರಗ್ಗೀಸ್' ಎಂದು ಅವಹೇಳನ ಮಾಡಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.