ನವದೆಹಲಿ: ಆನ್‌ಲೈನ್ ಪಾವತಿಗಾಗಿ ಭಾರತೀಯ ಪ್ರಜೆಗಳಿಂದ ಸಂಗ್ರಹಿಸಿದ ದತ್ತಾಂಶದ ಸುರಕ್ಷತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ಗೂಗಲ್, ಫೇಸ್‌ಬುಕ್, ಅಮೇಜಾನ್ ಮತ್ತು ವಾಟ್ಸ್ ಆ್ಯಪ್‌ನಂತಹ ಅಂತರ್ಜಾಲ ಬೃಹತ್ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಸಿಪಿಐ ಸಂಸದ ಬಿನೋಯ್ ವಿಶ್ವಂ ಸಲ್ಲಿಸಿದ್ದ ಅರ್ಜಿಯಲ್ಲಿ, ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಬಳಸುವ ಲಕ್ಷಾಂತರ ಭಾರತೀಯ ಬಳಕೆದಾರರ ದತ್ತಾಂಶದ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದರು.
ಯುಪಿಐ ವ್ಯವಸ್ಥೆಯನ್ನು ನಿಯಂತ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಪಿಸಿಐ), ವಿದೇಶಿ ಕಂಪನಿಗಳಿಗೆ ಹಣಕಾಸಿನ ವ್ಯವಹಾರಕ್ಕೆ ಅನುಮತಿ ನೀಡಿವೆ. ಇವುಗಳು ಅಮೆರಿಕ ಮೂಲದವುಗಳಾಗಿದ್ದು, ಈಗಾಗಲೇ ಹಲವು ಬಾರಿ ನೀತಿ, ನಿಯಮಗಳನ್ನು ಉಲ್ಲಂಘಿಸಿವೆ. ಆದ್ದರಿಂದ ಭಾರತೀಯ ಬಳಕೆದಾರರ ದತ್ತಾಂಶ ಹೆಚ್ಚಿನ ಅಪಾಯದಲ್ಲಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಭಾರತೀಯರ ದತ್ತಾಂಶವನ್ನು ಭಾರತದಲ್ಲಿ ಸಂಗ್ರಹಿಸುವ ಆರ್‌ಬಿಐನ ಹಿಂದಿನ ಆದೇಶವನ್ನು ಅನುಸರಿಸಲು ಎಲ್ಲಾ ವಿದೇಶಿ ಕಂಪನಿಗಳು ವಿಫಲವಾಗಿವೆ. ಆರ್‌ಬಿಐ ನಿಗದಿಪಡಿಸಿದ ಅಕ್ಟೋಬರ್ 2018ರ ಗಡುವು ಮುಗಿದಿದ್ದರೂ, ಅವುಗಳು ಈಗಲೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ವಿಷಯವನ್ನು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಸಂಪೂರ್ಣ ನಿಯಂತ್ರಣ ರೂಪುರೇಷೆಯನ್ನು ಸರಿಪಡಿಸಬೇಕು ಎಂದಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.