ಕೊಚ್ಚಿ: ಆಘಾತಕಾರಿ ಘಟನೆಯೊಂದರಲ್ಲಿ, ಇಬ್ಬರು ನೌಕಾಧಿಕಾರಿಗಳು ಹಾರಾಟ ನಡೆಸುತ್ತಿದ್ದ ಪವರ್ ಗ್ಲೈಡರ್ ನಿಯಂತ್ರಣ ಕಳೆದುಕೊಂಡು ಕೊಚ್ಚಿಯಲ್ಲಿ ಭಾನುವಾರ ಬೆಳಗಿನ ಜಾವ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ದಕ್ಷಿಣ ನೌಕಾ ಕಮಾಂಡ್ ನ ನೌಕಾ ವಾಯು ಕೇಂದ್ರ ಐಎನ್ಎಸ್ ಗರುಡಾದಿಂದ ಗ್ರೈಡರ್ ಟೇಕ್ ಆಫ್ ಆಯಿತು. ಲೆಫ್ಟಿನೆಂಟ್ ರಾಜೀವ್ ಜ್ಹಾ ಮತ್ತು ಪೆಟ್ಟಿ ಆಫೀಸರ್(ಎಲೆಕ್ಟ್ರಿಕಲ್ ಏರ್) ಸುನಿಲ್ ಕುಮಾರ್ ದಿನನಿತ್ಯದಂತೆ ತರಬೇತಿಗೆಂದು ಗ್ಲೈಡರ್ ನಲ್ಲಿ ಹಾರಾಟ ಆರಂಭಿಸಿದ್ದರು.
ಹಾರಾಟ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲಿಯೇ ತಾಂತ್ರಿಕ ದೋಷ ಕಂಡುಬಂದು ಬೆಳಗ್ಗೆ 7.15ರ ಹೊತ್ತಿಗೆ ತೊಪ್ಪುಂಪಾಡಿಯಲ್ಲಿ ಬಿಒಟಿ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಯಿತು.
ಬೆಳಗಿನ ವಾಕಿಂಗ್ ಹೋಗುತ್ತಿದ್ದ ಜನರು ಗ್ಲೈಡರ್ ಡಿಕ್ಕಿ ಹೊಡೆದಿದ್ದನ್ನು ಕಂಡು ಬಂದರು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ನೌಕಾಪಡೆ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಧಾವಿಸಿ ಇಬ್ಬರು ಅಧಿಕಾರಿಗಳನ್ನು ಐಎನ್ಎಸ್ ಸಂಜೀವಿನಿ ನೌಕಾ ಆಸ್ಪತ್ರೆಗೆ ವರ್ಗಾಯಿಸಿದರು.
ತೀವ್ರವಾಗಿ ಗಾಯಗೊಂಡಿದ್ದ ನೌಕಾಪಡೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ನಿಧನರಾದರು ಎಂದು ನೌಕಾಪಡೆ ವಕ್ತಾರ ಶ್ರೀಧರ್ ವಾರ್ರಿಯರ್ ತಿಳಿಸಿದ್ದಾರೆ. ಅಪಘಾತಕ್ಕೀಡಾದ ಗ್ಲೈಡರ್ ನ ಭಾಗಗಳನ್ನು ಕೊಚ್ಚಿ ನೌಕಾ ನೆಲೆಗೆ ಕೊಂಡೊಯ್ಯಲಾಗಿದ್ದು ದಕ್ಷಿಣ ನೌಕಾ ಕಮಾಂಡ್ ದುರ್ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ.
ಲೆಫ್ಟಿನೆಂಟ್ ರಾಜೀವ್ ಜ್ಹಾ 39 ವರ್ಷದವರಾಗಿದ್ದು ಡೆಹ್ರಾಡೂನ್ ಮೂಲದವರು, ಇನ್ನು 29 ವರ್ಷದ ಸುನಿಲ್ ಕುಮಾರ್ ಬಿಹಾರದ ಬೊಜ್ ಮೂಲದವರು.