ತಿರುವನಂತಪುರ: ಸತತ ನಾಲ್ಕನೇ ಬಾರಿಗೆ ಕೇರಳ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಬೆಂಗಳೂರು ಮೂಲದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ ಈ ಆಯ್ಕೆ ಮಾಡಿದೆ. ಕೇರಳದ ಹೊರತಾಗಿ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ಮೊದಲ ನಾಲ್ಕು ಸ್ಥಾನಗಳಲ್ಲಿವೆ.
ಪಟ್ಟಿಯಲ್ಲಿ ಉತ್ತರ ಪ್ರದೇಶ ಕೊಟ್ಟ ಕೊನೆಯ ರಾಜ್ಯವಾಗಿರುವುದಾಗಿ ತಿಳಿದುಬಂದಿದೆ. ಉತ್ತರ ಪ್ರದೇಶದ ಜೊತೆಗೆ ಒಡಿಶಾ ಮತ್ತು ಬಿಹಾರ ಕೂಡಾ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸುಸ್ಥಿತಿಯಲ್ಲಿರುವ ರಾಜ್ಯಗಳ ಪಟ್ಟಿ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಆಧರಿಸಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳಕ್ಕೆ ಲಭ್ಯವಾದ ಅತ್ಯುಚ್ಚ ಮಾನ್ಯತೆಯ ಬಗ್ಗೆ ಪೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಕೇರಳದ ಜನಪರ ಆಡಳಿತಕ್ಕೆ ನಾಲ್ಕನೇ ಬಾರಿಯೂ ಅನುಮೋದನೆ ಲಭ್ಯವಾಗಿದೆ. ಇಂದು(ಶುಕ್ರವಾರ) ಬಿಡುಗಡೆಯಾದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕೇರಳವನ್ನು ದೇಶದ ಅತ್ಯುತ್ತಮ ಆಡಳಿತ ರಾಜ್ಯವಾಗಿ ಮರು ಆಯ್ಕೆ ಮಾಡಲಾಗಿದೆ. ಕೇರಳ ಈ ಸಾಧನೆ ಮಾಡಿರುವುದು ಸತತ ನಾಲ್ಕನೇ ಬಾರಿಗೆ ಎಂದು ಮುಖ್ಯಮಂತ್ರಿ ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ.
ಸಮಗ್ರ ಸೂಚ್ಯಂಕದ ಅನುಸಾರ ಆಡಳಿತಾತ್ಮಕ ಶ್ರೇಷ್ಠತೆಯ ಆಧಾರದಲ್ಲಿ ಕೇರಳವು ಅಗ್ರಸ್ಥಾನದಲ್ಲಿದೆ. ಆಡಳಿತದ ಶ್ರೇಷ್ಠತೆ ಮತ್ತು ಸರ್ಕಾರದ ದಕ್ಷತೆಯ ದೃಷ್ಟಿಯಿಂದ ನಾವು ಮುಂದುವರಿಯಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಬರೆದುಕೊಂಡಿದ್ದಾರೆ.
ಈ ಸಾಧನೆಗೆ ಕೇರಳದ ಜನತೆ ಕಾರಣರಾಗಿದ್ದಾರೆ. ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಜನರು ನೀಡಿದ ಬೆಂಬಲ ಕೇರಳ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿರಲು ಸಹಾಯ ಮಾಡಿದೆ. ಈ ಸಾಧನೆಯು ಜನಪರ ಕೆಲಸಕ್ಕೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತದೆ ಎಂದು ಅವರು ಪೋಸ್ಟ್ ನಲ್ಲಿ ಹೇಳಿರುವರು.