ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಸೋಂಕು ವಕ್ಕರಿಸಿರೋದು ಹಳೆಯ ಸಂಗತಿ, ಆದರೆ ಟ್ರಂಪ್ ಆರೋಗ್ಯದ ಬಗ್ಗೆ ಎದ್ದಿರುವ ಊಹಾಪೋಹಗಳು ಸಾಕಷ್ಟು ಆತಂಕ ಸೃಷ್ಟಿಸಿವೆ. ಈ ನಡುವೆ ಟ್ರಂಪ್ ಆರೋಗ್ಯದ ಬಗ್ಗೆ ಎದ್ದಿರುವ ಎಲ್ಲಾ ಪ್ರಶ್ನೆಗಳಿಗೂ ಟ್ರಂಪ್ ವೀಡಿಯೋ ಮೂಲಕ ಉತ್ತರಿಸಿದ್ದು, ನಾನು ಈಗ ಚೇತರಿಸಿಕೊಳ್ಳುತ್ತಿದ್ದೀನಿ ಎಂದಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್ ನೀಡಿರುವ ಹೇಳಿಕೆ ಟ್ರಂಪ್ ಬೆಂಬಲಿಗರ ಆತಂಕ ಹೆಚ್ಚಿಸಿದೆ. ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್, ಟ್ರಂಪ್ ಆರೋಗ್ಯ ಆತಂಕಕಾರಿಯಾಗಿದೆ ಎಂದಿದ್ದಾರೆ.
ಅಲ್ಲದೆ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಎದುರಾಗಿದ್ದು, ಮುಂದಿನ 2 ದಿನಗಳು ಟ್ರಂಪ್ ಆರೋಗ್ಯದ ವಿಚಾರದಲ್ಲಿ ನಿರ್ಣಾಯಕವಾಗಿರಲಿವೆ ಎನ್ನುವ ಮೂಲಕ ಆತಂಕ ಹೆಚ್ಚಿಸಿದ್ದಾರೆ. ಇನ್ನೇನು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ತಿಂಗಳು ಬಾಕಿ ಇರುವ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ರಿಪಬ್ಲಿಕನ್ಸ್ ನಾಯಕರು ಹಾಗೂ ಟ್ರಂಪ್ ಬೆಂಬಲಿಗರಲ್ಲಿ ಭೀತಿ ಸೃಷ್ಟಿಸಿದೆ.
ವಿಶ್ವದ ಗಣ್ಯರಿಂದ ಹಾರೈಕೆ..!
ಟ್ರಂಪ್‌ಗೆ ಕೊರೊನಾ ಕನ್ಫರ್ಮ್ ಆಗುತ್ತಿದ್ದಂತೆ ವಿಶ್ವನಾಯಕರು ಟ್ವೀಟ್ ಹಾಗೂ ಸುದ್ದಿಗೋಷ್ಠಿ ಮೂಲಕವಾಗಿ ಟ್ರಂಪ್ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಈಗಾಗಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಟ್ರಂಪ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾನೆ. ರಷ್ಯಾ ಅಧ್ಯಕ್ಷ ಪುಟಿನ್ ಸೇರಿದಂತೆ ಯುರೋಪ್ ರಾಷ್ಟ್ರಗಳ ನಾಯಕರು, ಏಷ್ಯಾ ದೇಶಗಳ ನಾಯಕರು ಟ್ರಂಪ್ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ. ಇಡೀ ಜಗತ್ತಿನ ಪಾಲಿಗೆ ದೊಡ್ಡಣ್ಣನಾಗಿರುವ ಅಮೆರಿಕದ ಅಧ್ಯಕ್ಷರಿಗೆ ಮಹಾಮಾರಿ ಕೊರೊನಾ ವಕ್ಕರಿಸಿರುವುದು ಸಹಜವಾಗೇ ಆತಂಕ ಹೆಚ್ಚಿಸಿದೆ. ಆದರೂ ಟ್ರಂಪ್ ಮತ್ತು ಅಮೆರಿಕದ ವಿರೋಧಿ ರಾಷ್ಟ್ರಗಳು ಮಾನವೀಯತೆ ಮೆರೆಯುತ್ತಿವೆ.
ಟ್ರಂಪ್ ಅಧಿಕಾರ ಹಸ್ತಾಂತರ ಮಾಡಬಹುದೇ..?-ಆರೋಗ್ಯದಲ್ಲಿ ಏರುಪೇರಾದರೆ ಮುಂದೇನು ಎಂಬ ಪ್ರಶ್ನೆ
ಟ್ರಂಪ್ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸ್ಪಷ್ಟನೆ ಸಿಕ್ಕಿದ್ದರೂ, ಅವರ ಆರೋಗ್ಯ ಕ್ಷೀಣಿಸುತ್ತಿರುವ ಸಾಧ್ಯತೆಯೂ ದಟ್ಟವಾಗಿದೆ. ಅಕಸ್ಮಾತ್ ಟ್ರಂಪ್‌ಗೆ ಕೊರೊನಾ ಉಲ್ಬಣಿಸಿ, ಆರೋಗ್ಯದಲ್ಲಿ ಏರುಪೇರಾದರೆ ಮುಂದೇನು ಎಂಬ ಪ್ರಶ್ನೆ ಮೂಡಿದೆ. ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಅನಿವಾರ್ಯವಾಗುತ್ತದೆ. ಹೀಗೆ ಅಮೆರಿಕ ಅಧ್ಯಕ್ಷರ ಅಧಿಕಾರ ಹಸ್ತಾಂತರದ ಕುರಿತು ಅಮೆರಿಕ ಸಂವಿಧಾನದಲ್ಲಿ ಸ್ಪಷ್ಟನೆ ನೀಡಲಾಗಿದೆ.
25ನೇ ತಿದ್ದುಪಡಿಯ 3ನೇ ಸೆಕ್ಷನ್ ಅನುಸಾರ:
1963ರಲ್ಲಿ ನಡೆದ 25ನೇ ತಿದ್ದುಪಡಿಯ 3ನೇ ಸೆಕ್ಷನ್ ಅನುಸಾರ, ಅಧ್ಯಕ್ಷರು ತಮ್ಮ ಅಧಿಕಾರವನ್ನು ನಿಭಾಯಿಸುವಲ್ಲಿ ತಾತ್ಕಾಲಿಕವಾಗಿ ಅಸಮರ್ಥರಾದರೆ ಅಥವಾ ದೀರ್ಘಕಾಲಿನ ಅನಾರೋಗ್ಯಕ್ಕೆ ತುತ್ತಾದರೆ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಬಹುದು. ಅಧ್ಯಕ್ಷರು ಅಧಿಕಾರ ಹಸ್ತಾಂತರದ ಕುರಿತು ಪತ್ರದ ಮೂಲಕ ಅಧಿಸೂಚನೆ ಹೊರಡಿಸಬಹುದು. ಹಾಗೇ ಅಧಿಕಾರ ಮರಳಿ ಪಡೆಯಲು ಇದೇ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅಕಸ್ಮಾತ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ಉಲ್ಬಣಿಸಿ, ಆರೋಗ್ಯ ಕ್ಷೀಣಿಸಿದರೆ ಅಮೆರಿಕದ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್‌ಗೆ ಟ್ರಂಪ್ ತಮ್ಮ ಅಧ್ಯಕ್ಷೀಯ ಅಧಿಕಾರ ಹಸ್ತಾಂತರ ಮಾಡಬೇಕಾಗುತ್ತದೆ.
ಅಮೆರಿಕದ ಇತಿಹಾಸ ಏನು ಹೇಳುತ್ತದೆ..?
ನವೆಂಬರ್ 22, 1963 ಅಮೆರಿಕದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಮಾಡಿ ಹೋಗಿದೆ. ಅಂದು ಯಾರೂ ಊಹಿಸಲಾಗದ ಘಟನೆ ನಡೆದಿತ್ತು. ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರನ್ನ ಗುಂಡು ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೆನಡಿ ಹತ್ಯೆಯ ಬಳಿಕ ಅಮೆರಿಕದ ಸಂವಿಧಾನದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಇದರಲ್ಲಿ 25ನೇ ತಿದ್ದುಪಡಿ ಪ್ರಮುಖವಾದದ್ದು.
ರೇಗನ್ ಅಧಿಕಾರ ಉಪಾಧ್ಯಕ್ಷರಿಗೆ ಹಸ್ತಾಂತರ
1985ರಲ್ಲಿ 25ನೇ ತಿದ್ದುಪಡಿಯ 3ನೇ ಸೆಕ್ಷನ್ ಪ್ರಕಾರ ಅಮೆರಿಕದ 40ನೇ ಅಧ್ಯಕ್ಷ ರೋನಾಲ್ಡ್ ರೇಗನ್ ತಮ್ಮ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರ ಮಾಡಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆ ಸುಮಾರು 8 ಗಂಟೆಗಳ ಕಾಲ ಅಂದಿನ ಉಪಾಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ (ಜಾರ್ಜ್ ಡಬ್ಲ್ಯೂ ಬುಷ್ ತಂದೆ) ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಈ ಘಟನೆ ಮತ್ತೆ 2002 ಹಾಗೂ 2007ರಲ್ಲಿ ಮರುಕಳಿಸಿತ್ತು.
ಅಧ್ಯಕ್ಷೀಯ ಚುನಾವಣೆ ನಿಂತು ಹೋಗುವುದಾ..?
ತಜ್ಞರ ಪ್ರಕಾರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಸದ್ಯದ ಬೆಳವಣಿಗೆಗಳು ಯಾವುದೇ ರೀತಿ ಪ್ರಭಾವ ಬೀರಲಾರವು. ಏಕೆಂದರೆ ಈಗಾಗಲೇ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಕೆಲ ರಾಜ್ಯಗಳು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಬಹುಬೇಗ ಮತದಾನ ಆರಂಭಿಸಿವೆ. ಅಮೆರಿಕದಲ್ಲಿ ಒಕ್ಕೂಟ ವ್ಯವಸ್ಥೆಗೆ ಸಾಕಷ್ಟು ಬಲವಿದೆ. ರಾಜ್ಯಗಳು ಹಲವಾರು ನಿರ್ಧಾರಗಳನ್ನು ಕೇಂದ್ರದ ಒತ್ತಡವಿಲ್ಲದೆ ನಿರಾಯಾಸವಾಗಿ ತೆಗೆದುಕೊಂಡು, ಜನರ ಹಿತರಕ್ಷಣೆಗೆ ಮುಂದಾಗಬಹುದು. ಹೀಗಾಗಿ ಅಮೆರಿಕದ ಕೆಲವು ರಾಜ್ಯಗಳಲ್ಲಿ ಅಂಚೆ ಮತದಾನ ಈಗಾಗಲೇ ಆರಂಭವಾಗಿದೆ. ಅಕಸ್ಮಾತ್ ಟ್ರಂಪ್ ಅವರಿಗೆ ಏನಾದರೂ ಹೆಚ್ಚುಕಡಿಮೆ ಆದರೂ, ಚುನಾವಣೆ ಮಾತ್ರ ನಿಲ್ಲುವುದಿಲ್ಲ. ಹೀಗಾಗಿ ಯಾವುದೇ ಆತಂಕ ಬೇಡ ಎನ್ನುವುದು ತಜ್ಞರ ಸಲಹೆಯಾಗಿದೆ.