ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಕಾಸರಗೋಡು ಜಿಲ್ಲೆಯಲ್ಲಿ ಕಾವೇರುತ್ತಿರುವ ವೇಳೆ ಕೋವಿಡ್ ಪಾಸಿಟಿವ್ ಕೇಸುಗಳು ಇಲಿಮುಖವಾಗುತ್ತಿರುವುದು ಗಮನಾರ್ಹವಾಗಿದೆ.
ನ.11ರಿಂದ ನ.17 ವರೆಗೆ ವರದಿಯಾದದ್ದು 691 ಕೇಸುಗಳು ಮಾತ್ರ. ಈ ಅವಧಿಯಲ್ಲಿ 3 ಪಂಚಾಯತ್ಗಳಲ್ಲಿ ಖಚಿತಗೊಂಡದ್ದು ಕೇವಲ 1 ಕೇಸು ಎಂಬುದು ಉಲ್ಲೇಖನೀಯ ವಿಚಾರ. ವರ್ಕಾಡಿ, ಕಾರಡ್ಕ, ಮೀಂಜ ಗ್ರಾಮಪಂಚಾಯತ್ ಗಳಲ್ಲಿ ಈ ಅವಧಿಯಲ್ಲಿ ಒಂದೇ ಒಂದು ಕೇಸೂ ವರದಿಯಾಗಿಲ್ಲ.
ಬದಿಯಡ್ಕ(5 ಕೇಸು), ಬೆಳ್ಳೂರು(3), ಚೆಂಗಳ(6), ಈಸ್ಟ್ ಏಳೇರಿ(1), ಎಣ್ಮಕಜೆ(3), ಕುಂಬಡಾಜೆ(2), ಮಂಗಲ್ಪಾಡಿ(6)ಮೊಗ್ರಾಲ್ ಪುತ್ತೂರು(3), ಪೈವಳಿಕೆ(3), ವಲಿಯಪರಂಬ(2) ಗ್ರಾಮ ಪಂಚಾಯತ್ ಗಳಲ್ಲಿ ಹತ್ತಕ್ಕಿಂತ ಕಡಿಮೆ ಕೇಸುಗಳು ಈ ದಿನಗಳಲ್ಲಿ ವರದಿಯಾಗಿವೆ. ನವೆಂಬರ್ 11,13,15,17 ದಿನಗಳಲ್ಲಿ ರಾಜ್ಯದಲ್ಲೇ ಕಡಿಮೆ ಕೋವಿಡ್ ಕೇಸುಗಳು ವರದಿಯಾಗಿರುವುದು ಕಾಸರಗೋಡು ಜಿಲ್ಲೆಯಲ್ಲಿ.
ಕೋವಿಡ್ ಕೇಸುಗಳು ಕಡಿಮೆಯಾಗಿದ್ದರೂ, ಜಾಗರೂಕತೆ ಕೈಬಿಡಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ರೋಗ ಹೆಚ್ಚಳ ಕಡಿಮೆಮಾಡಲು ಆಂಟಿಜೆನ್ ಟೆಸ್ಟ್ ಹೆಚ್ಚಳಗೊಳಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ನ.11ರಿಂದ 17 ವರೆಗಿನ ದಿನಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 844 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 31,488 ಕೋವಿಡ್ ಪಾಸಿಟಿವ್ ಕೇಸುಗಳು ವರದಿಯಾದರೆ ಕಾಸರಗೋಡು ಜಿಲ್ಲೆಯಲ್ಲಿ 691 ಕೇಸುಗಳು ಮಾತ್ರ. ಅಂದರೆ ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು ವರದಿಯಾದ ಕೋವಿಡ್ ಕೇಸುಗಳ ಶೇ 2.9 ಮಾತ್ರ ಕಾಸರಗೋಡು ಜಿಲ್ಲೆಯಲ್ಲಿ ವರದಿಯಾಗಿದೆ. ಸೆಕ್ಟರಲ್ ಮೆಜಿಸ್ಟ್ರೇಟರುಗಳು, ಮಾಸ್ಟರ್ ಯೋಜನೆ ಮೂಲಕ ಶಿಕ್ಷಕರು ನಡೆಸಿದ ಜನಜಾಗೃತಿ ಚಟುವಟಿಕೆಗಳ ಪರಿಣಾಮ ಕೋವಿಡ್ ಸೋಂಕು ನಿಯಂತ್ರಣ ಕಂಡಿದೆ.