ನವದೆಹಲಿ: ಬಿಹಾರದಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ 14 ಸಚಿವರ ಪೈಕಿ ಎಂಟು ಸಚಿವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' (ಎಡಿಆರ್) ತಿಳಿಸಿದೆ.
ಎಂಟು ಸಚಿವರ ಪೈಕಿ ಆರು ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಇಂಥ ಪ್ರಕರಣಗಳು ಜಾಮೀನು ರಹಿತವಾಗಿದ್ದು, ಐದು ವರ್ಷಕ್ಕಿಂತಲೂ ಅಧಿಕ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಚಿವರುಗಳ ಪೈಕಿ ಇಬ್ಬರು ಜೆಡಿಯುನವರಾಗಿದ್ದು, ನಾಲ್ವರು ಬಿಜೆಪಿ ಹಾಗೂ ತಲಾ ಒಬ್ಬರು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಹಾಗೂ ವಿಕಾಸ್‌ಶೀಲ್ ಇನ್ಸಾನ್ ಪಕ್ಷದವರು.
14 ಸಚಿವರ ಪೈಕಿ 13 ಸಚಿವರು ಕೋಟ್ಯಾಧೀಶರಾಗಿದ್ದು, ಇವರ ಸರಾಸರಿ ಆಸ್ತಿ ₹3.93 ಕೋಟಿ ಇದೆ. ತಾರಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಮೇವಾ ಲಾಲ್ ಚೌಧರಿ ಅವರ ಆಸ್ತಿ ₹12.31 ಕೋಟಿ ಇದ್ದು, ಸಚಿವ ಅಶೋಕ್ ಚೌಧರಿ ಅವರು ಕನಿಷ್ಠ ಆಸ್ತಿ (₹72.89 ಲಕ್ಷ) ಹೊಂದಿದ್ದಾರೆ.
ಇತ್ತೀಚೆಗೆ ನಡೆದಿದ್ದ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಸಚಿವರಾಗಿ 14 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದರು.