ಕಾಸರಗೊಡು: ಉಚಿತ ಆಂಟಿಜೆನ್ ಟೆಸ್ಟ್ ಸೌಲಭ್ಯ ಕಾಞಂಗಾಡ್ ಕಿಯಾಸ್ಕ್ ನಲ್ಲಿ ಸಜ್ಜುಗೊಂಡಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಪರವಾನಗಿ ನೀಡಿರುವ ಈ ಪ್ರದೇಶಗಳ ವ್ಯಾಪಾರ ಸಂಸ್ಥೆಗಳ ಮಾಲೀಕರು, ಸಿಬ್ಬಂದಿ, ಸಂಚಾರ ವ್ಯವಸ್ಥೆಗಳ ಸಿಬ್ಬಂದಿ, ಸರಕಾರಿ ಸಿಬ್ಬಂದಿ 14 ದಿನಗಳಿಗೊಮ್ಮೆ ತಪಾಸಣೆಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಬೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಥಾ ಸಂಸ್ಥೆಗಳಲ್ಲಿ ಮಾತ್ರ ತಾವು ವ್ಯವಹರಿಸುವುದಾಗಿ ಸಾರ್ವಜನಿಕರು ನಿರ್ಧಾರ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು. ಜಿಲ್ಲೆಯಲ್ಲಿ ಚಟುವಟಿಕೆ ನಡೆಸುತ್ತಿರುವ 7 ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ ಗುರುವನಂ ಕೇಂದ್ರೀಯ ವಿದ್ಯಾಲಯ, ಪಡನ್ನಕ್ಕಾಡ್ ಕೇಂದ್ರೀಯ ವಿವಿ ಹಳೆಯ ಕಟ್ಟಡ, ಪೆರಿಯ ಕೇಂದ್ರೀಯ ವಿವಿ ಹಾಸ್ಟೆಲ್ ಗಳನ್ನು ಯಥಾವತ್ತಾಗಿ ಉಳಿಸಿಕೊಂಡು, ಬಾಕಿಯಿರುವವನ್ನು ಅಗತ್ಯಬಿದ್ದರೆ ಮಾತ್ರ ಈ ನಿಟ್ಟಿನಲ್ಲಿ ಬಳಸಿಕೊಳ್ಳುವ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಮರಳಿಸಲು ನಿರ್ಧರಿಸಿದೆ.
ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯಾಗಿರುವ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್, ಕ್ಲೀನಿಂಗ್ ಸ್ಟಾಫ್ ಇತ್ಯಾದಿ ಸಿಬ್ಬಂದಿಯನ್ನು ತಾತ್ಕಾಲಿಕ ರೂಪದಲ್ಲಿ ನೇಮಿಸಲು ಜಿಲ್ಲಾ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.