ನವದೆಹಲಿ: ನಾಗರಿಕ ಸರಬರಾಜು ವ್ಯವಸ್ಥೆಯ ಮೂಲಕ ಸಾರವರ್ಧಿತ ಅಕ್ಕಿಯನ್ನು ವಿತರಿಸಲು 15 ರಾಜ್ಯಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸಾರವರ್ಧಿತ ಅಕ್ಕಿಯನ್ನು ವಿತರಣೆ ಮಾಡಲು ಕೇಂದ್ರ ಸರ್ಕಾರ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು 174.6 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ಈ ಯೋಜನೆಯನ್ನು 2019-2020 ರಿಂದ ಮೂರು ವರ್ಷಗಳ ಅವಧಿಗೆ ಅನುಮೋದಿಸಲಾಗಿದೆ. ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕಾಗಿ 15 ರಾಜ್ಯ ಸರ್ಕಾರಗಳು ಆಯಾ ಜಿಲ್ಲೆಗಳನ್ನು (ರಾಜ್ಯಕ್ಕೆ 1 ಜಿಲ್ಲೆ) ಗುರುತಿಸಿವೆ. ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಛತ್ತೀಸ್ ಗಢ ರಾಜ್ಯಗಳು ಆಯಾ ಜಿಲ್ಲೆಗಳಲ್ಲಿ ಸಾರ ವರ್ಧಿತ ಅಕ್ಕಿಯನ್ನು ವಿತರಣೆಯನ್ನು ಆರಂಭಿಸಿವೆ.
ಈ ಸಂಬಂಧ ಅಕ್ಟೋಬರ್ 31 ರಂದು ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಪಿಯೂಷ್ ಗೋಯೆಲ್ ನೇತೃತ್ವದಲ್ಲಿ ಪರಿಶೀಲನಾ ಸಭೆಯಲ್ಲಿ ದೇಶದಲ್ಲಿ ಸಾರವರ್ಧಿತ ಅಕ್ಕಿ ವಿತರಣೆಯನ್ನು ಹೆಚ್ಚಿಸಲು ಒತ್ತು ನೀಡಲಾಗಿತ್ತು.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆದಿದ್ದು, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಯಡಿಯಲ್ಲಿ ದೇಶದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮತ್ತು ಖರೀದಿಗೆ ಸಮಗ್ರ ಯೋಜನೆ ರೂಪಿಸಲು ಭಾರತೀಯ ಆಹಾರ ನಿಗಮಕ್ಕೆ ಸೂಚಿಸಲಾಯಿತು. ದೇಶದಲ್ಲಿ 112 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಪೂರೈಸಲು ವಿಶೇಷ ಗಮನ ಹರಿಸಲಾಗಿದೆ.