ಗ್ವಾಲಿಯರ್: ಹದಿನೈದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಇಬ್ಬರು ಸಹೋದ್ಯೋಗಿಗಳು ಗ್ವಾಲಿಯರ್ ಫುಟ್‌ಪಾತ್‌ನಲ್ಲಿ ಆಕಸ್ಮಿಕವಾಗಿ ಪತ್ತೆ ಮಾಡಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಅಧಿಕಾರಿ ತಲೆಕೂದಲು ಕೆದರಿಕೊಂಡು, ಚಳಿಯಿಂದ ನಡುಗುತ್ತಿದ್ದುದು ಕಂಡುಬಂದಿದೆ. ಡಿವೈಎಸ್ಪಿಗಳಾದ ರತ್ನೇಶ್ ಸಿಂಗ್ ಥೋಮರ್ ಮತ್ತು ವಿಜಯ್ ಬಹದ್ದೂರ್ ಎಂಬುವವರು ನಗರದ ಕಲ್ಯಾಣ ಮಂಟಪವೊಂದರ ಎದುರು ವಾಹನದಲ್ಲಿ ಹೋಗುತ್ತಿದ್ದಾಗ ಭಿಕ್ಷುಕನಂತಿದ್ದ ಒಬ್ಬ ವ್ಯಕ್ತಿಯನ್ನು ಕಂಡರು. ಚಳಿಯಿಂದ ನಡುಗುತ್ತಿದ್ದ ಆತ ಎಲೆಗಳಲ್ಲಿ ಉಳಿದ ಆಹಾರಕ್ಕಾಗಿ ಹುಡುಕುತ್ತಿದ್ದ. ಇದನ್ನು ನೋಡಿದ ಇಬ್ಬರು ಅಧಿಕಾರಿಗಳ ಪೈಕಿ ಒಬ್ಬರು ತಮ್ಮ ಜಾಕೆಟ್ ತೆಗೆದು ಕೊಟ್ಟರು. ಅವರ ಹೆಸರಿನಿಂದ ಆ ವ್ಯಕ್ತಿ ಕರೆದಾಗ ಅವರಿಗೆ ಅಚ್ಚರಿಯಾಯಿತು ಎಂದು ಥೋಮರ್ ವಿವರಿಸಿದರು.
ಆ ವ್ಯಕ್ತಿ ತಮ್ಮ ಮಾಜಿ ಸಹೋದ್ಯೋಗಿ ಮನೀಶ್ ಮಿಶ್ರಾ ಎನ್ನುವುದು ಅವರಿಗೆ ಮನವರಿಕೆಯಾಯಿತು. 2005ರಲ್ಲಿ ದಾಟಿಯಾದಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಮಿಶ್ರಾ ನಾಪತ್ತೆಯಾಗಿದ್ದರು. ಇಷ್ಟು ವರ್ಷಗಳ ಕಾಲ ಅವರ ಚಲನವಲನಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂದು ಥೋಮರ್ ಸ್ಪಷ್ಟಪಡಿಸಿದರು.
ಬಳಿಕ ಇಬ್ಬರೂ ಅಧಿಕಾರಿಗಳು ತಮ್ಮ ಮಾಜಿ ಸಹೋದ್ಯೋಗಿಗಳನ್ನು ಸ್ಥಳೀಯ ಸ್ವಯಂಸೇವಾ ಸಂಸ್ಥೆಯೊಂದು ನಡೆಸುವ ಆಶ್ರಮಕ್ಕೆ ಕರೆದೊಯ್ದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು.
"ಮಿಶ್ರಾ ಒಳ್ಳೆಯ ಅಥ್ಲೀಟ್ ಮತ್ತು ಶಾರ್ಪ್‌ಶೂಟರ್ ಆಗಿದ್ದರು. 1999ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕೆಲ ವರ್ಷಗಳ ಬಳಿಕ ಮಾನಸಿಕ ಸಮಸ್ಯೆ ಕಾಡತೊಡಗಿತ್ತು. ಕುಟುಂಬದವರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದು ದಿನ ನಾಪತ್ತೆಯಾದರು" ಎಂದು ಥೋಮರ್ ನೆನಪಿಸಿಕೊಂಡರು.
ಮಿಶ್ರಾ ಅವರ ಸ್ನೇಹಿತರಾಗಿ ಅವರಿಗೆ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತೇವೆ. ಮತ್ತೆ ಸಹಜ ಸ್ಥಿತಿಗೆ ಬರುವಂತೆ ಪ್ರಯತ್ನಿಸುತ್ತೇವೆ ಎಂದರು.