ಕಾಸರಗೋಡು: ಈ ಬಾರಿಯ ರಾಜ್ಯಸರಕಾರ ಅಧಿಕಾರಕ್ಕೇರಿದ ಮೇಲೆ ನಾಲ್ಕೂವರೆ ವರ್ಷಗಳಲ್ಲಿ 1,63,610 ಕುಟುಂಬಗಳಿಗೆ ಭೂಹಕ್ಕು ಪತ್ರ ವಿತರಣೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲೆಯ 5 ಸ್ಮಾರ್ಟ್ ಗ್ರಾಮ ಕಚೇರಿಗಳ ನಿರ್ಮಾಣ ಉದ್ಘಾಟನೆಯನ್ನು ಬುಧವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆಸಿ ಅವರು ಮಾತನಾಡಿದರು. ಕೂಡ್ಲು, ತುರ್ತಿ, ಪಡ್ರೆ, ತೆಕ್ಕಿಲ್, ಕಾಞಂಗಾಡ್ ಸ್ಮಾರ್ಟ್ ಗ್ರಾಮಕಚೇರಿಗಳ ನಿರ್ಮಾಣ ಈ ಮೂಲಕ ಆರಂಭಗೊಂಡಿದೆ. ಇದೇ ವೇಳೆ ಚೆರುವತ್ತೂರು, ಚಿತ್ತಾರಿ ಸ್ಮಾರ್ಟ್ ಗ್ರಾಮ ಕಚೇರಿಗಳ ಕಟ್ಟಡ ಉದ್ಘಾಟನೆಯೂ ಜರುಗಿತು. ರಾಜ್ಯದ 159 ಸ್ಮಾರ್ಟ್ ಗ್ರಾಮ ಕಚೇರಿಗಳ ಉದ್ಘಾಟನೆ, 5 ಸ್ಮಾರ್ಟ್ ಗ್ರಾಮ ಕಚೇರಿಗಳ ನಿರ್ಮಾಣ ಚಟುವಟಿಕೆಗಳ ಉದ್ಘಾಟನೆ ಮತ್ತು 6524 ಕುಟುಂಬಗಳಿಗೆ ಭೂಹಕ್ಕು ಪತ್ರ ವಿತರಣೆ ಕಾರ್ಯಕ್ರಮಗಳ ಚಾಲನೆ ಅಂಗವಾಗಿ ಈ ಕಾರ್ಯಕ್ರಮ ಜರುಗಿತು.
ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 541 ಮಂದಿಗೆ ಭೂಹಕ್ಕು ಪತ್ರ ವಿತರಣೆ ಮಂಜೂರುಮಾಡಲಾಗಿದೆ. ಇವುಗಳಲ್ಲಿ ಮಂಜೇಶ್ವರ ತಾಲೂಕಿನಲ್ಲಿ 78 ಮಂದಿಗೆ, ಕಾಸರಗೋಡು ತಾಲೂಕಿನಲ್ಲಿ 50 ಮಂದಿಗೆ, ಹೊಸದುರ್ಗ ತಾಲೂಕಿನಲ್ಲಿ 98 ಮಂದಿಗೆ, ವೆಳ್ಳರಿಕುಂಡ್ ತಾಲೂಕಿನಲ್ಲಿ 32 ಮಂದಿಗೆ ಭೂಹಕ್ಕು ಪತ್ರ ಮಂಜೂರುಗೊಂಡಿದೆ. 283 ಮಂದಿಗೆ ಲಾಂಡ್ ಟ್ರಿಬ್ಯೂನಲ್ ಭೂಹಕ್ಕು ಪತ್ರ ಮಂಜೂರಾಗಿದೆ.
ಕಂದಾಯ ಇಲಾಖೆಯ ಚಟುವಟಿಕೆಗಳು ಗ್ರಾಮಾಂತರ ಪ್ರದೇಶಗಳ ಮಂದಿಗೂ ಸಾಂತ್ವನ ನಿಡುವಲ್ಲಿ ಯಶಸ್ವಿಯಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯಕಂದಾಯಾಧಿಕಾರಿ ಷಂಸುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ವಂದಿಸಿದರು.
62 ವರ್ಷಗಳ ನಂತರ ಲಭಿಸಿದ ಭೂಹಕ್ಕು ಪತ್ರ: ಬೇಡಗಂ ನ ನಾರಾಯಣಿಗೆ ಸಮಾಧಾನದ ನಿಟ್ಟುಸಿರು
ಕಾಸರಗೋಡು, ನ.4: 62 ವರ್ಷಗಳ ನಂತರ ಲಭಿಸಿದ ಭೂಹಕ್ಕು ಪತ್ರವು ಬೇಡಗಂ ನ ನಾರಾಯಣಿಗೆ ಸಮಾಧಾನದ ನಿಟ್ಟುಸಿರು ತಂದಿದೆ.
ರಾಜ್ಯ ಸರಕಾರದ ಲಾಮಡ್ ಟ್ರಿಬ್ಯೂನಲ್ ಭೂಹಕ್ಕು ಪತ್ರ ಅವರಿಗೆ ಈಗ ಲಭಿಸಿದೆ. ಇವರ ಪತಿ ಎಲುಂಬನ್ ಹಿಂದೆಯೇ ನಿಧನರಾಗಿದ್ದರು. ಮೂವರು ಮಕ್ಕಳು ಕೂಲಿಕಾರ್ಮಿಕರು. ತಾವು ವಾಸಿಸುತ್ತಿರುವ ಜಾಗದಲ್ಲಿ ಭೂಹಕ್ಕು ಪತ್ರ ಇಲ್ಲದೇ ಇವರು ಬಳಲುತ್ತಿದ್ದರು.